ADVERTISEMENT

ಸುಧಾ ಮೂರ್ತಿ ಹಿಂಬರಹ ಬಹಿರಂಗ: ಸರ್ಕಾರದಿಂದ ನ್ಯಾಯಾಂಗ ನಿಂದನೆ ಎಂದ ಜೆಡಿಎಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2025, 10:29 IST
Last Updated 18 ಅಕ್ಟೋಬರ್ 2025, 10:29 IST
<div class="paragraphs"><p>ಸುಧಾಮೂರ್ತಿ</p></div>

ಸುಧಾಮೂರ್ತಿ

   

ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜಾತಿವಾರು ಸಮೀಕ್ಷೆ ವಿಚಾರವಾಗಿ ನಡೆದುಕೊಂಡಿರುವ ವಿಚಾರವನ್ನು ಬಹಿರಂಗ ಮಾಡಿರುವುದು ನ್ಯಾಯಾಂಗ ನಿಂದನೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಕುರಿತು ಇಂದು ಎಕ್ಸ್ ಪೋಸ್ಟ್ ಮಾಡಿರುವ ಅದು, ಸರ್ಕಾರ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆ ಮಾಹಿತಿಗಳು ಸೋರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಸಮೀಕ್ಷೆಯಲ್ಲಿ ಜನರಿಂದ ಸಂಗ್ರಹಿಸಿದ ಮಾಹಿತಿಗಳು ಎಷ್ಟು ಸುರಕ್ಷಿತ? ಇನ್ಫೋಸಿಸ್‌ ಸಂಸ್ಥೆಯ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ನೀಡಿದ್ದ ಸ್ವಯಂ ದೃಢೀಕರಣ ಪತ್ರವನ್ನು, ಸಾರ್ವಜನಿಕಗೊಳಿಸಿ ಮಾಹಿತಿ ಸೋರಿಕೆ ಮಾಡಲಾಗಿದೆ. ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲವೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರೇ? ಎಂದು ಪ್ರಶ್ನಿಸಿದೆ.

ADVERTISEMENT

ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಸ್ವಯಂ ಇಚ್ಛೆಗೆ ಬಿಟ್ಟಿದ್ದು, ಇದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಗೌಪ್ಯವಾಗಿಡಬೇಕು ಮತ್ತು ಅದರ ದುರ್ಬಳಕೆಯನ್ನು ತಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ‌ ನೀಡಿದೆ ಎಂದಿದೆ.

ಜಾತಿಗಣತಿಯಲ್ಲಿ ಭಾಗವಹಿಸದವರು "ದೇಶದ್ರೋಹಿಗಳು" ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಕಟ್ಟಿದ್ದಾರೆ! ಮಾಹಿತಿ ಸೋರಿಕೆ ಮಾಡಿ ಸುಧಾಮೂರ್ತಿ ಮತ್ತು ಅವರ ಕುಟುಂಬದವರ ತೇಜೋವಧೆ ಮಾಡಲಾಗುತ್ತಿದೆ. ಈ‌ ದುಷ್ಕೃತ್ಯದಲ್ಲಿ ಕಾಂಗ್ರೆಸ್ಸಿನ ನಾಯಕರೇ ಮುಂಚೂಣಿಯಲ್ಲಿ ಇದ್ದಾರೆ. ಮಾಹಿತಿ ಸೋರಿಕೆ ಸರ್ಕಾರದ ಪ್ರಾಯೋಜಿತ ಕೃತ್ಯ ಎಂಬ ಶಂಕೆಗೆ ಇದು ಪುಷ್ಠಿ ನೀಡಿದೆ. ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯ ವಿಶ್ವಸಾರ್ಹತೆ ಬಗ್ಗೆ ಅನುಮಾನ ಪಡುವಂತಾಗಿದೆ. ಸಮೀಕ್ಷೆಯು ಪಾರದರ್ಶಕವಾಗಿಲ್ಲ. ಮಾಹಿತಿಯೂ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ! ಎಂದು ಆರೋಪಿಸಿದೆ.

ಗಣತಿದಾರರು ಮನೆಗೆ ಹೋದಾಗ ಸುಧಾಮೂರ್ತಿ ಅವರು ನಾವು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂದು ಹಿಂಬರಹ ಬರೆದುಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.