ADVERTISEMENT

ಜಾತಿವಾರು ಸಮೀಕ್ಷೆ: ಮಾಹಿತಿ ನೀಡಲು ಸುಧಾ-ನಾರಾಯಣಮೂರ್ತಿ ನಿರಾಕರಣೆ

ಸಮೀಕ್ಷೆಯಿಂದ ಸರ್ಕಾರಕ್ಕೆ ಉಪಯೋಗವಿಲ್ಲ ಎಂದಿರುವ ಇನ್ಫೊಸಿಸ್ ಸಂಸ್ಥಾಪಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2025, 4:52 IST
Last Updated 16 ಅಕ್ಟೋಬರ್ 2025, 4:52 IST
<div class="paragraphs"><p>ಸುಧಾಮೂರ್ತಿ</p></div>

ಸುಧಾಮೂರ್ತಿ

   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ಇನ್ಫೊಸಿಸ್‌ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸ್ವಯಂ ದೃಢೀಕರಣ ಪತ್ರ ನೀಡಿದ್ದಾರೆ.

ಇದೇ 10ರಂದು ಸಮೀಕ್ಷಕರಿಗೆ ಅವರು ನೀಡಿರುವ ಈ ಪತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ADVERTISEMENT

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಸಮೀಕ್ಷೆಗಾಗಿ ವಾರ್ಡ್‌ವಾರು ಗಣ್ಯರು ಮತ್ತು ಅತಿಗಣ್ಯರ ಪಟ್ಟಿಯನ್ನು ಮಾಡಿಕೊಳ್ಳಲಾಗಿತ್ತು. ಈ ಪಟ್ಟಿಯಲ್ಲಿ ಇರುವವರ ಮನೆಯ ಸಮೀಕ್ಷೆಗೆ ಸಮೀಕ್ಷಕರು ಮಾತ್ರವಲ್ಲದೆ ಸಹಾಯಕ ಕಂದಾಯ ಅಧಿಕಾರಿ, ರೆವಿನ್ಯೂ ಇನ್‌ಸ್ಪೆಕ್ಟರ್‌ ಅವರನ್ನು ಒಳಗೊಂಡ ತಂಡವು ಭೇಟಿ ನೀಡುವಂತೆ ಸೂಚಿಸಲಾಗಿತ್ತು’ ಎಂದು ಜಿಬಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಗರದ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ಅವರ ಮನೆಯನ್ನು ಈ ವಿಐಪಿ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭವಾದ ಮೊದಲ ದಿನವೇ ಅವರ ಮನೆಗೆ ಭೇಟಿ ನೀಡಲಾಗಿತ್ತು. ಆಗ ಅವರು ತಾವು ಸಮೀಕ್ಷೆಗೆ ಮಾಹಿತಿ ನಿರಾಕರಿಸುತ್ತೇನೆ ಎಂದು ಸ್ವಯಂ ದೃಢೀಕರಣ ಪತ್ರಕ್ಕೆ ಸಹಿ ಹಾಕಿಕೊಟ್ಟರು’ ಎಂಬುದನ್ನು ಖಚಿತಪಡಿಸಿದರು.

‘ಹಿಂದುಳಿದ ವರ್ಗಗಳ ಆಯೋಗವು, ಮಾಹಿತಿ ನಿರಾಕರಿಸುವವರ ಸ್ವಯಂ ದೃಢೀಕರಣಕ್ಕೆ ನಮೂನೆಯೊಂದನ್ನು ನೀಡಿದೆ. ಯಾವ ಕಾರಣಕ್ಕೆ ಮಾಹಿತಿ ನಿರಾಕರಿಸುತ್ತಿದ್ದೇವೆ ಎಂಬ ಅಂಶವನ್ನು ದಾಖಲಿಸಲು ಆ ಅರ್ಜಿಯಲ್ಲಿ ಅವಕಾಶವಿರಲಿಲ್ಲ. ಆದರೂ ನಾರಾಯಣಮೂರ್ತಿ ಅವರು, ಯಾವ ಕಾರಣಕ್ಕೆ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂಬುದನ್ನು ವಿವರಿಸಿ ಸಹಿ ಮಾಡಿಕೊಟ್ಟರು’ ಎಂದು ಅಧಿಕಾರಿ ವಿವರಿಸಿದರು.

‘ನಗರದ ಎಲ್ಲ ವಾರ್ಡ್‌ಗಳಲ್ಲಿ ಇರುವ ನಿವೃತ್ತ ನ್ಯಾಯಮೂರ್ತಿಗಳು, ಉದ್ಯಮಿಗಳು, ಚಿತ್ರನಟರು, ಕಲಾವಿದರು, ಸಾಹಿತಿಗಳನ್ನು ಒಳಗೊಂಡು ಅತಿಗಣ್ಯರ ಮನೆಗಳನ್ನು ಪಟ್ಟಿ ಮಾಡಿ, ಈಗಾಗಲೇ ಭೇಟಿ ನೀಡಲಾಗಿದೆ. ಕೆಲವರು ಸಮೀಕ್ಷೆಯಲ್ಲಿ ಭಾಗವಹಿಸಿ, ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವರು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರ ನೀಡಿದ್ದಾರೆ. ಮತ್ತೂ ಕೆಲವರು ಬೇರೆ ಸಮಯದಲ್ಲಿ ಬರುವಂತೆ ತಿಳಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು.

‘ಸಮೀಕ್ಷೆಗೆ ಮಾಹಿತಿ ನೀಡಲೇಬೇಕು ಎಂದು ಯಾರನ್ನೂ ಒತ್ತಾಯಿಸುತ್ತಿಲ್ಲ. ಸಮೀಕ್ಷೆಯಲ್ಲಿ ಭಾಗವಹಿಸಿದ ಕೆಲವು ಗಣ್ಯರು, ಸ್ವತಃ ತಾವೇ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರಿಂದ ಸಮೀಕ್ಷಕರಿಗೆ ಅನುಕೂಲವಾಗಿದೆ’ ಎಂದರು.

ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿ ನೀಡಿರುವ ಸ್ವಯಂ ದೃಢೀಕರಣ ಪತ್ರ

‘ನಾವು ಹಿಂದುಳಿದ ಜಾತಿಯವರಲ್ಲ...’

‘ನಾವು ಹಿಂದುಳಿದ ಯಾವುದೇ ಜಾತಿಗೆ ಸೇರಿದವರಲ್ಲ. ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಇದರಲ್ಲಿ ಭಾಗವಹಿಸುವುದಿಲ್ಲ’ ಎಂದು ಸುಧಾ ಮೂರ್ತಿ ಮತ್ತು ನಾರಾಯಣಮೂರ್ತಿ ಅವರು ಸ್ವಯಂ ದೃಢೀಕರಣ ಪತ್ರದಲ್ಲಿ ಬರೆದಿದ್ದಾರೆ. ನಾರಾಯಣಮೂರ್ತಿ ಅವರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಸಮೀಕ್ಷಕರಿಗೆ ಮಾಹಿತಿ ನೀಡಿದರು

ಸಮೀಕ್ಷೆಗೆ ಮಾಹಿತಿ ನೀಡಿದ ಸಿ.ಎಂ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ಸಂಗ್ರಹಿಸಲು ಸಮೀಕ್ಷಕರು ಮುಖ್ಯಮಂತ್ರಿ ಅವರ ಕಾವೇರಿ ನಿವಾಸಕ್ಕೆ ಗುರುವಾರ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಸಮೀಕ್ಷಕರಿಗೆ ಮಾಹಿತಿ ನೀಡಿದರು. ಸುಮಾರು 45 ನಿಮಷಗಳವರೆಗೆ ಈ ಪ್ರಕ್ರಿಯೆ ನಡೆಯಿತು. ಸಮೀಕ್ಷಕರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು. ಬಾಕ್ಸ್‌... ‘ಒಂದು ಜಾತಿಗೆ ಸೀಮಿತವಲ್ಲ’ ಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸಮೀಕ್ಷೆಯಲ್ಲ ರಾಜ್ಯದ ಪ್ರತಿಯೊಬ್ಬರ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವೈಜ್ಞಾನಿಕ ಪ್ರಯತ್ನ. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಖಂಡಿತಾ ಆಗದು. ಚಿಂತೆ ಬಿಟ್ಟು ಧೈರ್ಯವಾಗಿ ಸಿಬ್ಬಂದಿಗಳ ಜೊತೆ ಮಾಹಿತಿ ಹಂಚಿಕೊಳ್ಳಿ. ಅಸಮಾನತೆ ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಈ ಸಮೀಕ್ಷೆಯನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಂಡು ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು. ಆಗ ಮಾತ್ರ ಸಮಾಜದ ವಾಸ್ತವ ಸ್ಥಿತಿಗತಿಯ ಬಗೆಗೆ ನಿಖರ ಮಾಹಿತಿ ದೊರೆತು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿ (ಸಮೀಕ್ಷಕರಿಗೆ ಮಾಹಿತಿ ನೀಡಿದ ನಂತರ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್)

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಿ ಎಂದು ಯಾರನ್ನೂ ಬಲವಂತ ಮಾಡಲು ಅವಕಾಶವಿಲ್ಲ. ಮಾಹಿತಿ ನೀಡುವುದು ಅಥವಾ ನಿರಾಕರಿಸುವುದು ಅವರ ಇಚ್ಛೆ
-ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ
ಸಮೀಕ್ಷೆಯಲ್ಲಿ ಯಾರು ಏನು ಮಾಹಿತಿ ನೀಡಿದ್ದಾರೆ ಎಂಬುದನ್ನು ನಾನು ಹೇಳಲು ಅವಕಾಶವಿಲ್ಲ. ಸಮೀಕ್ಷೆಯ ವಿವರ ಗೋಪ್ಯವಾಗಿ ಇರಬೇಕು.
-ಎಂ.ಮಹೇಶ್ವರ ರಾವ್‌, ಜಿಬಿಎ ಮುಖ್ಯ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.