
ಸುವರ್ಣ ವಿಧಾನಸೌಧ (ಬೆಳಗಾವಿ): ‘ಹಿಂದುಳಿದ ವರ್ಗಗಳ ಆದಾಯ ಮಿತಿ ಸಂಬಂಧ ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ತಂತ್ರಾಂಶವನ್ನು ಅಪ್‌ಡೇಟ್ ಮಾಡಿಲ್ಲ. ಈ ಕಾರಣದಿಂದಾಗಿ ಗುತ್ತಿಗೆಯಲ್ಲಿ ಮೀಸಲಾತಿಗಾಗಿ ಜಾತಿ ಪ್ರಮಾಣಪತ್ರ ಅಗತ್ಯವಿರುವವರಿಗೆ, ಅವುಗಳನ್ನು ನೀಡಲಾಗುತ್ತಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ತಿಗೆ ತಿಳಿಸಿದರು.
ವಿಧಾನ ಪರಿಷತ್ತಿನ ಮಂಗಳವಾರದ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಯತೀಂದ್ರ ಎಸ್. ಅವರು ಈ ವಿಷಯ ಪ್ರಸ್ತಾಪಿಸಿದರು. ‘ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ-2ಎ ಸಮುದಾಯದವರಿಗೆ ₹1 ಕೋಟಿವರೆಗಿನ ಸಿವಿಲ್ ಕಾಮಗಾರಿಗಳಲ್ಲಿ ಸರ್ಕಾರವು ಮೀಸಲಾತಿ ಕಲ್ಪಿಸಿದೆ. ಆದರೆ ಜಾತಿ ಪ್ರಮಾಣಪತ್ರ ಸಿಗದೇ ಇರುವ ಕಾರಣಕ್ಕೆ ಮೀಸಲಾತಿಯ ಪ್ರಯೋಜನ ಈ ಸಮುದಾಯದವರಿಗೆ ಸಿಗುತ್ತಿಲ್ಲ’ ಎಂದರು.
‘ಹಿಂದುಳಿದ ವರ್ಗದವರಿಗೆ ಕೆನೆಪದರ ನೀತಿ ಅನ್ವಯವಾಗುತ್ತದೆ. ಈ ವರ್ಗದವರಿಗೆ ಜಾತಿ-ಆದಾಯ ಪ್ರಮಾಣಪತ್ರ ಪಡೆಯಲು ವಾರ್ಷಿಕ ₹8 ಲಕ್ಷ ಆದಾಯ ಮಿತಿ ಇದೆ. ಯಾವುದೇ ಗುತ್ತಿಗೆದಾರರಿಗೂ ಇಷ್ಟು ಕಡಿಮೆ ಆದಾಯ ಇರಲು ಸಾಧ್ಯವಿಲ್ಲ. ಗುತ್ತಿಗೆಯಲ್ಲಿ ಮೀಸಲಾತಿ ಪಡೆದುಕೊಳ್ಳಲು ಇವರು ಜಾತಿ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ ಜಾತಿ ಪ್ರಮಾಣಪತ್ರ ಪಡೆಯುವ ಪೋರ್ಟಲ್‌ನಲ್ಲಿ ₹8 ಲಕ್ಷಕ್ಕಿಂತ ಹೆಚ್ಚು ಆದಾಯ ನಮೂದಿಸಿದ ತಕ್ಷಣ, ಅದು ಅರ್ಜಿಯನ್ನು ತಿರಸ್ಕರಿಸುತ್ತದೆ. ಈ ಸಮಸ್ಯೆ ಬಗೆಹರಿಸುವಲ್ಲಿ ಕಂದಾಯ ಇಲಾಖೆ ವಿಳಂಬ ತೋರುತ್ತಿದೆ’ ಎಂದರು.
ಸಚಿವ ಕೃಷ್ಣ ಬೈರೇಗೌಡ, ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಸಂಬಂಧ ಜುಲೈ 29ರಂದು ಆದೇಶ ಹೊರಡಿಸಿದೆ. ಜಾತಿ-ಆದಾಯ ಪ್ರಮಾಣಪತ್ರ ನೀಡುವಲ್ಲಿ ಇರುವ ತೊಡಕನ್ನು ಗಮನಿಸಿ, ಅದನ್ನು ಸರಿಪಡಿಸಿ ಎಂದು ಎನ್‌ಐಸಿಗೆ ಆಗಸ್ಟ್‌ನಲ್ಲಿಯೇ ಮನವಿ ಸಲ್ಲಿಸಿದ್ದೇವೆ. ಅವರಿಂದ ಇನ್ನೂ ಆ ಕೆಲಸ ಆಗಿಲ್ಲ. ಈ ಬಗ್ಗೆ ಎನ್‌ಐಸಿಯ ಬೆನ್ನುಬಿದ್ದು, ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.