ADVERTISEMENT

ಕ್ರಿಸ್‌ ಗೋಪಾಲಕೃಷ್ಣನ್‌, ಇತರರ ವಿರುದ್ಧದ ಜಾತಿ ನಿಂದನೆ ಆರೋಪ: ಪ್ರಕರಣ ರದ್ದು

ಐಐಎಸ್‌ಸಿ ನಿರ್ದೇಶಕ ಕ್ರಿಸ್ ಗೋಪಾಲಕೃಷ್ಣನ್‌ ಸೇರಿ 16 ಜನರ ವಿರುದ್ಧದ ದೂರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 0:47 IST
Last Updated 29 ಏಪ್ರಿಲ್ 2025, 0:47 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಜಾತಿ ನಿಂದನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಫೊಸಿಸ್‌ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆಡಳಿತ ಮಂಡಳಿ ಅಧ್ಯಕ್ಷ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌ ಹಾಗೂ ಐಐಎಸ್‌ಸಿ ನಿರ್ದೇಶಕ ಗೋವಿಂದನ್‌ ರಂಗರಾಜನ್‌ ಸೇರಿದಂತೆ ಒಟ್ಟು 16 ಜನರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

‘ನಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್‌ ಸೇರಿದಂತೆ ಒಟ್ಟು 16 ಜನರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.

ಐಐಸಿಎಸ್‌ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಭೋವಿ ಸಮುದಾಯದ ದೂರುದಾರ ಡಿ.ಸಣ್ಣ ದುರ್ಗಪ್ಪ ಅವರನ್ನು; ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ಅದನ್ನು ರಾಜೀನಾಮೆ ರೂಪಕ್ಕೆ ಪರಿವರ್ತಿಸಲಾಗಿತ್ತು. ನಂತರ ಸಣ್ಣ ದುರ್ಗಪ್ಪ ಅವರು, ‘ಜಾತಿ ತಾರತಮ್ಯ ನಡೆಸುವ ಮೂಲಕ ನನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ಆರೋಪಿಸಿ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ADVERTISEMENT

ಒಟ್ಟು 18 ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ, ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(8), 3(14), 3(1)(2), 3(ಎಕ್ಸ್‌) ಅಡಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಈ ಕುರಿತ ಎಫ್‌ಐಆರ್‌ ಮತ್ತು 71ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಪರಿಗಣಿಸಿರುವ ಖಾಸಗಿ ದೂರನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ಪ್ರತಿವಾದಿ ಡಿ.ಸಣ್ಣ ದುರ್ಗಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿರುವ ಕ್ರಮ ಮತ್ತು ಅದನ್ನು ರಾಜೀನಾಮೆಯನ್ನಾಗಿ ಪರಿಗಣಿಸಿರುವುದು ಸಿವಿಲ್​ ಪ್ರಕ್ರಿಯೆಯಾಗಿದೆ. ಇಂತಹುದನ್ನು ಕ್ರಿಮಿನಲ್ ಆರೋಪದಡಿ ದೂರು ದಾಖಲಿಸುವುದು ಸಾಧ್ಯವಿಲ್ಲ. ಇದು ಅರ್ಜಿದಾರರಿಗೆ ಕಿರುಕುಳ ನೀಡುವ ದುರುದ್ದೇಶಪೂರಿತ ಪ್ರಯತ್ನ. ಆದ್ದರಿಂದ, ದೂರನ್ನು ವಜಾಗೊಳಿಸಲಾಗುತ್ತಿದೆ’ ಎಂದು ಹೇಳಿದೆ.

ಅಂತೆಯೇ, ಪ್ರಕರಣದ ದೂರುದಾರರ ವಿರುದ್ಧ ಕ್ರಿಮಿನಲ್​ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸುವುದಕ್ಕೆ ಅನುಮತಿ ಕೋರಿ ರಾಜ್ಯ ಅಡ್ವೋಕೇಟ್​ ಜನರಲ್​ ಅವರಿಗೆ ಅನುಮತಿ ಕೋರಲು ಅರ್ಜಿದಾರರಿಗೆ ಸ್ವಾತಂತ್ರ್ಯನೀಡಿದೆ.

ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದವರು: ರಿಜಿಸ್ಟ್ರಾರ್‌ ಕ್ಯಾಪ್ಟನ್‌ ಶ್ರೀಧರ್‌ ವಾರಿಯರ್‌, ಆಡಳಿತ ಮಂಡಳಿ ಮುಖ್ಯಸ್ಥ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಡೀನ್‌ ಪಿ.ಅನಿಲ್‌ ಕುಮಾರ್‌, ಎಂಸಿಬಿಯ ಆಡಳಿತ ಮತ್ತು ಹಣಕಾಸು ವಿಭಾಗದ ಡೀನ್‌ ದೀಪ್‌ಶಿಖಾ ಚಕ್ರವರ್ತಿ, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ನಮ್ರತಾ ಗುಂಡಯ್ಯ, ವೈದ್ಯಕೀಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿರ್ಮಲಾ, ಬಯೊ ಎಂಜಿನಿಯರಿಂಗ್‌ ವಿಭಾಗದ ಸಂಧ್ಯಾ ಎಸ್‌.ವಿಶ್ವೇಶ್ವರಯ್ಯ (ನಿವೃತ್ತ), ಇಸಿಇ ವಿಭಾಗದ ಕೆ.ವಿ.ಎಸ್‌ ಹರಿ, ಸಿಎಸ್‌ಟಿ ವಿಭಾಗದ ಎಸ್‌.ದಾಸಪ್ಪ, ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗದ ಪ್ರಧಾನ ಸಂಶೋಧನಾ ವಿಜ್ಞಾನಿ ಪಿ.ಬಾಲಚಂದ್ರ, ಐಐಎಸ್‌ಸಿ ಮಾಜಿ ನಿರ್ದೇಶಕ ಪಿ.ಬಲರಾಮ್‌, ಬಯೊ ಕೆಮಿಸ್ಟ್ರಿ ವಿಭಾಗದ ಅಂಜಲಿ ಎ.ಕಾರಂಡೆ (ನಿವೃತ್ತ), ಕೆ.ಚಟ್ಟೋಪಾಧ್ಯಾಯ (ನಿವೃತ್ತ), ವಕೀಲರಾದ ಪ್ರದೀಪ್‌ ಎಸ್‌.ಸಾವ್ಕಾರ್‌ ಮತ್ತು ಅಭಿಲಾಷ್‌ ರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.