ADVERTISEMENT

Caste Census |ಅ.31ರವರೆಗೆ ವಿಸ್ತರಣೆ; ಸಮೀಕ್ಷಾ ಕಾರ್ಯದಿಂದ ಶಿಕ್ಷಕರಿಗೆ ಮುಕ್ತಿ

ಇತರೆ ಇಲಾಖೆಯ ಸಿಬ್ಬಂದಿ ಬಳಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:49 IST
Last Updated 19 ಅಕ್ಟೋಬರ್ 2025, 15:49 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿವಾರು ಸಮೀಕ್ಷೆಯ ಪ್ರಗತಿ ಪರಿಶೀಲನೆ ಭಾನುವಾರ ನಡೆಸಿದರು. ಸಚಿವರಾದ ಕೆ.ಜೆ. ಜಾರ್ಜ್‌, ಶಿವರಾಜ್‌ ತಂಗಡಗಿ, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌ ಮತ್ತಿತರರು ಇದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿವಾರು ಸಮೀಕ್ಷೆಯ ಪ್ರಗತಿ ಪರಿಶೀಲನೆ ಭಾನುವಾರ ನಡೆಸಿದರು. ಸಚಿವರಾದ ಕೆ.ಜೆ. ಜಾರ್ಜ್‌, ಶಿವರಾಜ್‌ ತಂಗಡಗಿ, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌ ಮತ್ತಿತರರು ಇದ್ದರು   

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿವಾರು ಸಮೀಕ್ಷೆ) ಅವಧಿಯನ್ನು ಇದೇ 31ರವರೆಗೆ ವಿಸ್ತರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ದಸರಾ ರಜೆ ಕಳೆದು ಶಾಲೆಗಳು ಆರಂಭವಾಗಿರುವ ಕಾರಣ ಮುಂದಿನ ಒಂಬತ್ತು ದಿನ ನಡೆಯಲಿರುವ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಸಮೀಕ್ಷಕರಿಗೆ 3 ದಿನ ರಜೆ:

‘ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ದೀಪಾವಳಿ ಹಬ್ಬದ ಕಾರಣ ಇದೇ 20, 21 ಮತ್ತು 22ರಂದು ರಜೆ ನೀಡಲಾಗಿದೆ. 23ರಿಂದ ಮತ್ತೆ ಸಮೀಕ್ಷೆ ಆರಂಭವಾಗಲಿದೆ. ಆಯಾ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಸಿಬ್ಬಂದಿ ಬಳಸಿಕೊಂಡು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಹೊರತುಪಡಿಸಿ ರಾಜ್ಯದಾದ್ಯಂತ ಶೇಕಡ 95ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಶೇಕಡಾ ನೂರರಷ್ಟು ಪೂರ್ಣಗೊಂಡಿದೆ. ರಾಮನಗರ (ಶೇ 86), ಧಾರವಾಡ (ಶೇ 88) ಮತ್ತು ಬೀದರ್‌ನಲ್ಲಿ (ಶೇ 79.46) ತುಸು ಕುಂಠಿತವಾಗಿದೆ. ಬೆಂಗಳೂರಿನಲ್ಲಿ ತಡವಾಗಿ ಸಮೀಕ್ಷೆ ಆರಂಭವಾದ ಕಾರಣ ಶೇಕಡ 45ರಷ್ಟು ಪ್ರಗತಿ ಆಗಿದೆ. ಬಾಕಿ ಇರುವ ಜಿಲ್ಲೆಗಳಲ್ಲಿ ಮಾತ್ರ ಅ. 31ರವರೆಗೆ ಸಮೀಕ್ಷೆ ನಡೆಯಲಿದೆ’ ಎಂದರು.

ಜವಾಬ್ದಾರಿ ಸ್ಥಾನದಲ್ಲಿ ಇರುವವರು ತಿಳಿದು ಮಾತನಾಡಲಿ:

ಇನ್ಫೊಸಿಸ್‌ನ ಸುಧಾ ಮೂರ್ತಿಯವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸುಧಾಮೂರ್ತಿ ಅವರು ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಇಂತಹ ಹೇಳಿಕೆ ನೀಡುವ ಬದಲು ಅದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಇದು ಯಾವುದೋ ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೀಮಿತವಾದ ಸಮೀಕ್ಷೆಯಲ್ಲ. ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಬಾರದು’ ಎಂದರು.

‘ಧಾರವಾಡದಲ್ಲಿ ಶೇಕಡವಾರು ಸಮೀಕ್ಷೆ ಕಡಿಮೆಯಾಗಲು ರಾಜಕೀಯ ಕಾರಣಗಳು ಇರಬಹುದೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸ್ಥಳೀಯ ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು, ‘ನಾನು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ. ನೀವು ಪಾಲ್ಗೊಳ್ಳಬೇಡಿ’ ಎಂದು ಜನರಿಗೆ ಹೇಳಿದರು. ಇಂತಹ ವರ್ತನೆ ನಿಜಕ್ಕೂ ಸರಿಯಲ್ಲ. ಜವಾಬ್ದಾರಿಯಲ್ಲಿ ಸ್ಥಾನದಲ್ಲಿ ಇರುವವರನ್ನು ಜನ ಗಮನಿಸುತ್ತಿರುತ್ತಾರೆ. ಹೀಗಾದರೆ ನಾವು ಕೇಂದ್ರ ಸರ್ಕಾರ ನಡೆಸುವ ಗಣತಿಯನ್ನು ವಿರೋಧ ಮಾಡಬಹುದೇ’ ಎಂದು ಪ್ರತಿಕ್ರಿಯಿಸಿದರು.

* ಸಿ.ಎಂ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ * ದೀಪಾವಳಿ: ಸಮೀಕ್ಷೆಗೆ 3 ದಿನ ಬಿಡುವು * ಬೆಂಗಳೂರಿನಲ್ಲಿ ಶಾಸಕರ ಮೂಲಕ ಜಾಗೃತಿ
ಸಮೀಕ್ಷೆ ಬಗ್ಗೆ ಬೆಂಗಳೂರಿನ ಜನರಲ್ಲಿ ಜಾಗೃತಿ ಮೂಡಿಸುವಂತೆ ಶಾಸಕರಿಗೆ ನಿರ್ದೇಶನ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಚಿವಾಲಯದಿಂದ ಸೂಚನೆ ರವಾನೆಯಾಗಲಿದೆ
ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ 
ಸಮೀಕ್ಷೆ ಕಾರ್ಯದಿಂದ ಕೈಬಿಡುವಂತೆ ಸಚಿವಾಲಯ ಸಿಬ್ಬಂದಿ ಮನವಿ ಮಾಡುತ್ತಿದ್ದಾರೆ. ಹಾಗೆಂದು ಸಮೀಕ್ಷೆ ಪೂರ್ಣಗೊಳ್ಳಬೇಕಲ್ಲವೇ?
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.