ಬೆಂಗಳೂರು: ರಾಜ್ಯ ಸರ್ಕಾರ ಹೊಸದಾಗಿ ನಡೆಸಲಿರುವ ಜಾತಿವಾರು ಸಮೀಕ್ಷೆ ವೇಳೆ ವೀರಶೈವ -ಲಿಂಗಾಯತ ಸಮುದಾಯದ ನೈಜ ಸಂಖ್ಯೆಯನ್ನು ಖಚಿತಪಡಿಸುವ ಕುರಿತು ವೀರಶೈವ ಲಿಂಗಾಯತ ಸಮುದಾಯದ ಕಾಂಗ್ರೆಸ್ ಸಚಿವರು, ಶಾಸಕರು ಚರ್ಚೆ ನಡೆಸಿದ್ದಾರೆ.
ಇದೇ 22ರಂದು ಪಕ್ಷಾತೀತವಾಗಿ ಸಮುದಾಯದ ನಾಯಕರ ಸಭೆ ಕರೆದು ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಗೊತ್ತಾಗಿದೆ
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಲಕ್ಷ್ಮೀ ಹೆಬ್ಬಾಳಕರ, ಶಿವಾನಂದ ಪಾಟೀಲ, ಶರಣಬಸಪ್ಪ ದರ್ಶನಾಪೂರ, ಶರಣ ಪ್ರಕಾಶ್ ಪಾಟೀಲ, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಬಿ.ಆರ್. ಪಾಟೀಲ, ಲಕ್ಷ್ಮಣ ಸವದಿ ಸೇರಿದಂತೆ 34ಕ್ಕೂ ಹೆಚ್ಚು ಜನಪ್ರತಿನಿಧಿಗಳು, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮತ್ತಿತರರು ಇದ್ದರು.
ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ಮತ್ತು ಮುಂಬರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವೇಳೆ ವೀರಶೈವ ಮತ್ತು ಲಿಂಗಾಯತ ಸಮುದಾಯದ ಹೆಸರನ್ನು ನಮೂದಿಸುವ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸುವ ಬಗ್ಗೆಯೂ ಚರ್ಚೆ ನಡೆಯಿತು ಎನ್ನಲಾಗಿದೆ.
ಕೆಲವರು ಲಿಂಗಾಯತ ಎಂದೂ, ಮತ್ತೆ ಕೆಲವರು ವೀರಶೈವ ಎಂದು ಬರೆಸುತ್ತಾರೆ. ಮತ್ತೆ ಕೆಲವರು ತಮ್ಮ ಉಪ ಜಾತಿಯನ್ನಷ್ಟೇ ಬರೆಸುತ್ತಾರೆ. ಹೀಗಾಗಿ, ಸಮುದಾಯದ ಒಟ್ಟಾರೆ ಸಂಖ್ಯೆ ಕುಸಿಯದಂತೆ ಮತ್ತು ಮೀಸಲಾತಿಗೆ ಧಕ್ಕೆ ಬಾರದ ರೀತಿಯಲ್ಲಿ ಮತ್ತು ಸಮಾಜದ ಏಕತೆಗೂ ಚ್ಯುತಿ ಆಗದಂತೆ ಎಲ್ಲ ಉಪ ಪಂಗಡಗಳನ್ನೂ ಸೇರಿಸಿಕೊಂಡು ಸಾಮುದಾಯಿಕ ಪ್ರಯತ್ನ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತಂತೆ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ವಿವಿಧ ಉಪ ಜಾತಿಗಳ ಸಂಘಟನೆಗಳ ಮುಖಂಡರು ಮತ್ತು ವಿವಿಧ ಮಠಾಧಿಪತಿಗಳ ಜೊತೆ ಚರ್ಚಿಸಿ, ಮನವೊಲಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.