ADVERTISEMENT

ಬೆಂಗಳೂರು: ಜಾತಿವಾರು ಸಮೀಕ್ಷೆ ಅವಧಿ ವಿಸ್ತರಣೆ

ಸಮೀಕ್ಷಕರಿಗೆ ಅನುಕೂಲ ಕಲ್ಪಿಸಲು ಶಾಲೆಗಳ ತರಗತಿ ಅವಧಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 16:19 IST
Last Updated 6 ಅಕ್ಟೋಬರ್ 2025, 16:19 IST
   

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಅ.12ರವರೆಗೆ ವಿಸ್ತರಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅ.24ರವರೆಗೂ ಸಮೀಕ್ಷೆ ನಡೆಯಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿ ಬಿಟ್ಟು, ರಾಜ್ಯದಾದ್ಯಂತ ಸೆ. 22ರಿಂದ ಸಮೀಕ್ಷೆ ಆರಂಭಗೊಂಡಿದ್ದು, ಮಂಗಳವಾರ (ಅ.7) ಅಂತ್ಯ ಆಗಬೇಕಿತ್ತು. ಸೋಮವಾರದವರೆಗೆ (ಅ. 6) ಶೇಕಡಾ 80.39ರಷ್ಟು ಪೂರ್ಣಗೊಂಡಿದೆ. ಮಂಗಳವಾರ ಕೊನೆಯ ದಿನ ಆಗಿರುವ ಕಾರಣ, ಅವಧಿಯನ್ನು ವಿಸ್ತರಿಸಲಾಗಿದೆ.

ದಸರಾ ರಜೆಯ ಬಳಿಕ ಅ. 8ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಹೀಗಾಗಿ, ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಅನುಕೂಲ ಕಲ್ಪಿಸಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯವನ್ನು ಮರು ನಿಗದಿಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಸುರಳ್ಕರ್‌ ವಿಕಾಸ್ ಕಿಶೋರ್‌ ಅವರು ರಾಜ್ಯದ ಎಲ್ಲ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

ADVERTISEMENT

‘ಜಿಬಿಎ ವ್ಯಾಪ್ತಿಯಲ್ಲಿ ಶನಿವಾರದಿಂದ (ಅ. 4) ಸಮೀಕ್ಷೆ ಶುರುವಾಗಿದೆ. ಎರಡು ದಿನಗಳ ಅವಧಿಯಲ್ಲಿ ಗುರಿ ನಿಗದಿಪಡಿಸಿರುವ ಒಟ್ಟು 39.82 ಲಕ್ಷ ಮನೆಗಳ ಪೈಕಿ, 2,60,900 ಮನೆಗಳಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ತಿಳಿಸಿವೆ.

ರಾಜ್ಯದಾದ್ಯಂತ ಆರಂಭದ 3–4 ದಿನ ಮೊಬೈಲ್‌ ಆ್ಯಪ್‌ನಲ್ಲಿ ತಾಂತ್ರಿಕ ದೋಷ, ನೆಟ್‌ವರ್ಕ್‌ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಆಮೆಗತಿಯಲ್ಲಿ ಸಮೀಕ್ಷೆ ಸಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ಕಾರ್ಯ ಚುರುಕು ಪಡೆದಿತ್ತು.

ಶಾಲಾ ಅವಧಿ ಪರಿಷ್ಕರಣೆ

ಸಮೀಕ್ಷೆ ಪೂರ್ಣಗೊಳಿಸಲು ಹೆಚ್ಚಿನ ಸಮಯಾವಕಾಶದ ಅಗತ್ಯ ಇರುವ ಬಗ್ಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ. 26ರಂದೇ ಸಭೆ ನಡೆಸಿ, ಚರ್ಚಿಸಲಾಗಿತ್ತು. ದಸರಾ ರಜಾ ಅವಧಿಯ ನಂತರವೂ ಸಮೀಕ್ಷೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ರಜಾ ಅವಧಿಯ ನಂತರ ಶಾಲೆ ನಡೆಯುವ ಸಮಯವನ್ನು ಪರಿಷ್ಕರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

‘ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಧ್ಯವಾರ್ಷಿಕ ರಜಾ ದಿನಗಳ ನಂತರ ಶಾಲಾ ತರಗತಿಗಳು ಸಮೀಕ್ಷೆಯ ಕಾರಣಕ್ಕೆ ಕುಂಠಿತ ಆಗಬಾರದು ಎನ್ನುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪರಿಷ್ಕೃತ ಸಮಯದಂತೆ ಕಾರ್ಯನಿರ್ವಹಿಸಬೇಕು’ ಎಂದು ಸುರಳ್ಕರ್‌ ವಿಕಾಸ್ ಕಿಶೋರ್‌ ತಿಳಿಸಿದ್ದಾರೆ.

‘ಜನರ ನಿಲುವೇ ನನ್ನ ನಿಲುವು’: ಮುಖ್ಯಮಂತ್ರಿ  ಸಿದ್ದರಾಮಯ್ಯ

ಸಮೀಕ್ಷೆಯ ಕುರಿತು ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಮುಖ್ಯಮಂತ್ರಿ  ಸಿದ್ದರಾಮಯ್ಯ, ‘ಜನ ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ತಿಳಿಸಿದಂತೆ ಸಮೀಕ್ಷೆ ಮಾಡುವವರು ಬರೆದುಕೊಳ್ಳುತ್ತಾರೆ. ಜನರ ನಿಲುವೇ ನನ್ನ ನಿಲುವು ಕೂಡ ಆಗಿದೆ’ ಎಂದರು.

ಮಂಗಳೂರಿನಲ್ಲಿ ಮಾತನಾಡಿದ ಶಾಲಾ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ಶೇ 95ರಷ್ಟು ಶಿಕ್ಷಕರು ತಕರಾರು ತೆಗೆಯದೇ ಸಮೀಕ್ಷೆಗೆ ಸಹಕರಿಸಿದ್ದಾರೆ.‌ ಆ್ಯಪ್‌ನಲ್ಲಿ ನಾಲ್ಕು-ಐದು ಸಲ ಬದಲಾವಣೆ ಮಾಡಿದ್ದರಿಂದ‌ ಸಮಸ್ಯೆ ಎದುರಾಗಿತ್ತು. ಆ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಈಗ ಪ್ರತಿ ಕುಟುಂಬದ ಸಮೀಕ್ಷೆ ಕೇವಲ‌ 10 ರಿಂದ 11 ನಿಮಿಷದಲ್ಲಿ ಮುಗಿಯುತ್ತಿದೆ’ ಎಂದು ತಿಳಿಸಿದರು.

‘ಸಮೀಕ್ಷೆ‌ಗೆ ಸಹಕರಿಸಬಾರದು ಎಂದು ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ‌ ನಾಯಕ ಆರ್.ಅಶೋಕ, ಸಂಸದ ತೇಜಸ್ವಿ ಸೂರ್ಯ ಮೊದಲಾದ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ.‌ ಕೇಂದ್ರ ಸರ್ಕಾರವೂ ಮುಂಬರುವ ಮಾರ್ಚ್‌ನಲ್ಲಿ ಜಾತಿಗಣತಿ ನಡೆಸಲು ಸಿದ್ಧತೆ ನಡೆಸಿದೆ. ಆಗಲೂ ಬಿಜೆಪಿಯವರು ಇದೇ ರೀತಿ ಅಸಹಕಾರ ನೀಡುತ್ತಾರೆಯೇ. ಆಗ ರಾಜ್ಯ ಸರ್ಕಾರದ ಸಹಕಾರವೂ ಬೇಕಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಏನೇ ಹೇಳಿದರೂ ಜನರು ಸಮೀಕ್ಷೆಯ ಪರವಾಗಿದ್ದಾರೆ. ಕೆಲ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸಮೀಕ್ಷೆದಾರರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂಬ ದೂರುಗಳಿವೆ. ಈ ಅಧಿಕಾರ ಅವರಿಗಿಲ್ಲ. ಈ ರೀತಿ ಮಾಡಿದರೆ ಅವರ ಮೂಲಸೌಕರ್ಯ ಕಡಿತಗೊಳಿಸುವುದಕ್ಕೂ ಅವಕಾಶ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.