ಬೆಂಗಳೂರು: ‘ಸಮೀಕ್ಷಾ ಕಾರ್ಯಕ್ಕೆ ವಿರೋಧ ಪಕ್ಷದ ಕೆಲವು ಮುಖಂಡರು ಅದರಲ್ಲೂ ಪ್ರಬಲ ಜಾತಿಯ ಜನರು ವಿರೋಧ ಮಾಡುತ್ತಿರುವುದಲ್ಲದೇ, ಜಾತಿ ಗಣತಿ ಎಂದು ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿರುವುದು ಖಂಡನೀಯ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಅವರು, ‘ಪ್ರತಿಪಕ್ಷಗಳ ಮುಖಂಡರ ವಿರೋಧವು ಮುಂದುವರಿದಲ್ಲಿ ವಿರೋಧ ಮಾಡುವವರ ಮನೆಯ ಮುಂದೆ ಹಿಂದುಳಿದ ಜಾತಿಗಳ ಒಕ್ಕೂಟವು ಧರಣಿಯನ್ನು ಮಾಡಬೇಕಾಗುತ್ತದೆ. ಅಂತಹವರು ಪ್ರತಿನಿಧಿಸುವ ಪಕ್ಷಗಳನ್ನು ಮುಂದಿನ ದಿನಗಳಲ್ಲಿ ಬಹಿಷ್ಕರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಹಿಂದುಳಿದ ವರ್ಗಗಳ ಆಯೋಗದ ಕಾರ್ಯಗಳಿಗೆ ರಾಜ್ಯ ಸರ್ಕಾರವಾಗಲಿ ಅಥವಾ ಮತ್ಯಾವುದೋ ಅನ್ಯ ಸಂಸ್ಥೆಗಳಾಗಲಿ ಹಸ್ತಕ್ಷೇಪ ಮಾಡಲು, ನಿರ್ದೇಶನ ನೀಡಲು ಅವಕಾಶವಿಲ್ಲ. ಈ ಸಮೀಕ್ಷೆಯು ಹಿಂದುಳಿದ ಜಾತಿಗಳ ಸಮೀಕ್ಷೆಯಾಗಿರದೇ ಇದೊಂದು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವವನ್ನು ಒಳಗೊಂಡಿರುವ ಸಾಮಾಜಿಕ ಕ್ರಾಂತಿಯಾಗಿರುತ್ತದೆ’ ಎಂದು ಹೇಳಿದರು.
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ ಶೇ 80ರಷ್ಟು ಪೂರ್ಣಗೊಂಡಿದ್ದು, ಅವಧಿಯನ್ನು ವಿಸ್ತರಿಸಬೇಕು. ಆನ್‌ಲೈನ್‌ನಲ್ಲಿ ಮಾಹಿತಿ ನೀಡುವ ಪ್ರಕ್ರಿಯೆಗೆ ಇನ್ನೂ ಅಧಿಕ ಸಮಯ ನೀಡಬೇಕು’ ಎಂದರು.
ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಎಂ. ಲಾತೂರ್, ಉಪಾಧ್ಯಕ್ಷ ಕೆ. ವೆಂಕಟಸುಬ್ಬರಾಜು, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನಂಜಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.