ADVERTISEMENT

ತಮಿಳುನಾಡಿಗೆ ಕಾವೇರಿ ನೀರು | ಕನ್ನಡಪರ ಸಂಘಟನೆಗಳ ಪ್ರತಿಭಟನೆ: ಬಂಧನ

ಟೋಲ್ ಪ್ಲಾಜಾ ಬಳಿ ಉರುಳು ಸೇವೆ; ರಾಮನಗರದಲ್ಲಿ ಕರ್ನಾಟಕ ಜಲ ರಕ್ಷಣಾ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 10:32 IST
Last Updated 13 ಸೆಪ್ಟೆಂಬರ್ 2023, 10:32 IST
<div class="paragraphs"><p>ಟೋಲ್ ಪ್ಲಾಜಾ ಬಳಿ ಉರುಳು ಸೇವೆ; ರಾಮನಗರದಲ್ಲಿ ಕರ್ನಾಟಕ ಜಲ ರಕ್ಷಣಾ ಸಮಿತಿ ಪ್ರತಿಭಟನೆ</p></div>

ಟೋಲ್ ಪ್ಲಾಜಾ ಬಳಿ ಉರುಳು ಸೇವೆ; ರಾಮನಗರದಲ್ಲಿ ಕರ್ನಾಟಕ ಜಲ ರಕ್ಷಣಾ ಸಮಿತಿ ಪ್ರತಿಭಟನೆ

   

ರಾಮನಗರ: ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (ಡಿಡಬ್ಲ್ಯೂಆರ್‌ಸಿ) ಶಿಫಾರಸು ಮಾಡಿರುವುದನ್ನು ಖಂಡಿಸಿ, ಕನ್ನಡಪರ ಸಂಘಟನೆಗಳ ಮುಖಂಡರು ಬೆಂಗಳೂರು–ಮಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಕಣಮಿಣಕಿ ಟೋಲ್ ಪ್ಲಾಜಾ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಟೋಲ್ ಎದುರು ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ಹೆದ್ದಾರಿಯಲ್ಲೇ ಉರುಳು ಸೇವೆ ಮಾಡಿದರು. ತಮಿಳುನಾಡು ಸರ್ಕಾರ ಮತ್ತು ಸಿಡಬ್ಲ್ಯೂಆರ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿದರು.

ADVERTISEMENT

ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದರೂ, ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ವಿರುದ್ಧವೂ ಆಕ್ರೋಶ ಹೊರ ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ, ಹೆದ್ದಾರಿ ತಡೆಯಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಮನವೊಲಿಸಲು ಯತ್ನಿಸಿದರು. ಪೊಲೀಸರಿಗೆ ಮಾತಿಗೆ ಜಗ್ಗದೆ ರಸ್ತೆ ತಡೆಗೆ ಮುಂದಾದ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರು ಬಂಧಿಸಿ, ವಾಹನದಲ್ಲಿ ಕರೆದೊಯ್ದರು.

ರಾಮನಗರದಲ್ಲೂ ರಸ್ತೆ ತಡೆ

ಕಾವೇರಿ ನೀರಿನ ಸಮಸ್ಯೆ ಮತ್ತು ಮೇಕೆದಾಟು ಯೋಜನೆ ಕುರಿತು ರಾಮನಗರದಲ್ಲಿ ಚಿಂಥನ–ಮಂಥನ ಸಭೆ ನಡೆಸಿದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ, ರಾಜ್ಯ ರೈತಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು, ಎಪಿಎಂಸಿ ಬಳಿ ಬೆಂಗಳೂರು–ಮೈಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ರೈತ ಸಂಘದ ಕುರುಬೂರು ಶಾಂತಕುಮಾರ್, ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್, ಕೃಷಿ ತಜ್ಞ ಪ್ರಕಾಶ ಕಮ್ಮರಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ರೈತ ಮುಖಂಡ ಸಿ. ಪುಟ್ಟಸ್ವಾಮಿ, ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.