ADVERTISEMENT

ಡಿಕೆಶಿ ವಿರುದ್ಧ ಸಿಬಿಐ ತನಿಖೆ: ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶ ವಾಪಸ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
<div class="paragraphs"><p>ಡಿ.ಕೆ. ಶಿವಕುಮಾರ್ </p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ಆದಾಯ‌ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಉಪ ಮುಖ್ಯಮಂತ್ರಿಯೂ ಆಗಿರುವ ಶಿವಕುಮಾರ್ ಅನುಪಸ್ಥಿತಿಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ. ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸಂಪುಟ ಸಭೆಯಲ್ಲಿಉಪಸ್ಥಿತರಿದ್ದು ತೀರ್ಮಾನದಲ್ಲಿ ಭಾಗಿಯಾದರೆ, ಹಿತಾಸಕ್ತಿ ಸಂಘರ್ಷದ ಪ್ರಶ್ನೆಯನ್ನು ಸಿಬಿಐಯು ಕೋರ್ಟ್‌ ಮುಂದಿಡಬಹುದು ಎಂಬ ಕಾರಣಕ್ಕೆ ಅವರು ದೂರ ಉಳಿದರು ಎಂದು ಹೇಳಲಾಗಿದೆ.

ADVERTISEMENT

ಯಡಿಯೂರಪ್ಪ ನೇತೃತ್ವದ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್‌ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಇದೇ 29ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಅಂದು ನಡೆಯುವ ವಿಚಾರಣೆ ವೇಳೆ ಸಚಿವ ಸಂಪುಟದ ತೀರ್ಮಾನವನ್ನು ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ, ‘ಶಿವಕುಮಾರ್ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಲು ಹಿಂದಿನ ಸರ್ಕಾರ ನಿರ್ಣಯ ಕೈಗೊಂಡಿತ್ತು. ಸಿಬಿಐಗೆ ವಹಿಸುವ ಮೊದಲು ವಿಧಾನ ಸಭಾಧ್ಯಕ್ಷರಿಂದ ಒಪ್ಪಿಗೆ ಪಡೆಯಬೇಕಿತ್ತು. ಅದನ್ನು ಪಡೆಯದೇ ಶಿಫಾರಸು ಮಾಡಲಾಗಿತ್ತು. ಹಿಂದಿನ ಸರ್ಕಾರ ಕಾನೂನುಬಾಹಿರವಾಗಿ ನಿರ್ಧಾರ ಕೈಗೊಂಡಿದೆ ಎಂಬ ಕಾರಣಕ್ಕೆ ವಾಪಸ್ ಪಡೆಯಲು ನಿರ್ಧರಿಸಲಾಯಿತು ಎಂದರು.

‘ಈ ತೀರ್ಮಾನ ಕೈಗೊಳ್ಳುವ ಮುನ್ನ ಹಿಂದಿನ ಹಾಗೂ ಈಗಿನ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ
ವನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ. ಶುಕ್ರವಾರ ಅಥವಾ ಶನಿವಾರ ಈ ಕುರಿತು ಆದೇಶ ಹೊರಡಿಸ
ಲಾಗುವುದು’ ಎಂದರು. 

ಪ್ರಕರಣದ ಸಂಬಂಧ, ಅಡ್ವೊಕೇಟ್ ಜನರಲ್‌ ಶಶಿಕಿರಣ ಶೆಟ್ಟಿ ಅವರು, ತಮ್ಮ ಅಭಿಪ್ರಾಯವನ್ನು ಗೃಹ ಇಲಾಖೆಗೆ ನೀಡಿದ್ದರು. ಅದನ್ನು ಆಧರಿಸಿ, ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಮಂಡಿಸಲಾಗಿತ್ತು.

ಪ್ರಕರಣವೇನು?:

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಶಾಸಕರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿದ್ದ ಪ್ರಕರಣವನ್ನು, 2019ರ ಸೆ. 25ರಂದು ಸಿಬಿಐಗೆ ವಹಿಸಲು ಆದೇಶ ಹೊರಡಿಸಿದ್ದರು. ದೆಹಲಿಯ ವಿಶೇಷ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 1946 ಅಡಿ ಸೆಕ್ಷನ್ 6 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅ. 3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

‘ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಶಿವಕುಮಾರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠವು 2023ರ ಏಪ್ರಿಲ್‌ನಲ್ಲಿ ವಜಾಗೊಳಿಸಿತ್ತು. 

ಎಫ್‌ಐಆರ್‌ನಲ್ಲಿ ಏನಿತ್ತು?

2013-18ರ ಐದು ವರ್ಷಗಳಲ್ಲಿ ಶಿವಕುಮಾರ್‌ ಆಸ್ತಿ ಶೇ 380ರಷ್ಟು ಏರಿಕೆಯಾಗಿದೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಹೇಳಿತ್ತು. ಶಿವಕುಮಾರ್ ಅವರು ಚುನಾವಣಾ ಉದ್ದೇಶಕ್ಕಾಗಿ 2013ರ ಏಪ್ರಿಲ್ 13ರಂದು ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ತಮ್ಮ ಆಸ್ತಿ ₹33.92 ಕೋಟಿ. ಇದು ಏಪ್ರಿಲ್ 30, 2018ಕ್ಕೆ ₹162.53 ಕೋಟಿಗೆ ಏರಿತು. ಐದು ವರ್ಷಗಳಲ್ಲಿ ನಿವ್ವಳ ಹೆಚ್ಚಳವು ₹128.6 ಕೋಟಿಯಾಗಿದೆ. ಗೊತ್ತಿರುವ ಆದಾಯದ ಮೂಲಗಳಿಗಿಂತ ಹೆಚ್ಚಿದ ಆದಾಯ ₹74.93 ಕೋಟಿ ಎಂದು ಎಫ್‌ಐಆರ್ ಉಲ್ಲೇಖಿಸಿತ್ತು.

ಗುಜರಾತ್ ಶಾಸಕರ ರಕ್ಷಣೆ: ಐ.ಟಿ. ದಾಳಿ

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು 2017ರಲ್ಲಿ ಚುನಾವಣೆ ನಡೆದಿತ್ತು. ಈ ವೇಳೆ, ‘ಆಪರೇಷನ್ ಕಮಲ’ದಿಂದ ಬಚಾವ್ ಮಾಡಲು ಅಲ್ಲಿಂದ ಕರೆತರಲಾಗಿದ್ದ ಶಾಸಕರಿಗೆ  ಈಗಲ್‌ಟನ್ ರೆಸಾರ್ಟ್‌ನಲ್ಲಿ ‘ರಕ್ಷಣೆ’ ನೀಡಲಾಗಿತ್ತು. ಈ ಜವಾಬ್ದಾರಿಯನ್ನು ಶಿವಕುಮಾರ್ ನಿರ್ವಹಿಸಿದ್ದರು. ಆಗ ರೆಸಾರ್ಟ್‌ಗೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ ₹8.59 ಕೋಟಿ ವಶಪಡಿಸಿ ಕೊಂಡಿದ್ದರು. ಆದಾಯ ತೆರಿಗೆ ನೀಡಿದ ಮಾಹಿತಿ ಆಧರಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶಿವಕುಮಾರ್ ಅವರನ್ನು ಬಂಧಿಸಿದ್ದರು. ಇ.ಡಿ ತನಿಖೆ ಆಧರಿಸಿ, ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.