ADVERTISEMENT

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಈ ವರುಷವೂ ಬಾಲಕಿಯರೇ ಮೇಲುಗೈ

ಶೇ 92ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 6 ಮೇ 2019, 20:16 IST
Last Updated 6 ಮೇ 2019, 20:16 IST
ರಕುಟುಂಬದ ಮಕ್ಕಳೊಂದಿಗೆ ಸಂಭ್ರಮಿಸುತ್ತಿರುವ ರೂಪ ಶಿವಳ್ಳಿ
ರಕುಟುಂಬದ ಮಕ್ಕಳೊಂದಿಗೆ ಸಂಭ್ರಮಿಸುತ್ತಿರುವ ರೂಪ ಶಿವಳ್ಳಿ   

ನವದೆಹಲಿ: ಸಿಬಿಎಸ್‌ಇ 10ನೇತರಗತಿಯ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಶೇ 92.45 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕರಿಗಿಂತ ಶೇ 2.31 ರಷ್ಟು ಹೆಚ್ಚು ಸಾಧನೆ ಮಾಡಿದ್ದಾರೆ.

500 ಅಂಕಗಳಿಗೆ 499 ಅಂಕಪಡೆದ 13 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್‌ ಪಡೆದಿದ್ದಾರೆ. 24 ವಿದ್ಯಾರ್ಥಿಗಳು ಎರಡನೇ ಮತ್ತು 58 ವಿದ್ಯಾರ್ಥಿಗಳು ಮೂರನೇ ರ‍್ಯಾಂಕ್‌ ಪಡೆದಿದ್ದಾರೆ.57,256ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕಪಡೆದಿದ್ದರೆ, 2.25 ಲಕ್ಷ ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.ತಿರುವನಂತಪುರ ವಲಯ ಉತ್ತಮ ಸಾಧನೆ ಮಾಡಿದ್ದು, ಶೇ 99.85 ರಷ್ಟು ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಮತ್ತು ಅಜ್ಮೀರ್‌ ವಲಯಗಳಿದ್ದು, ಕ್ರಮವಾಗಿ ಶೇ 99 ಹಾಗೂ ಶೇ 95.89 ರಷ್ಟು ಸಾಧನೆ ಮಾಡಿವೆ. ಗುವಾಹಟಿ ಶೇ 74.49 ರಷ್ಟು ಫಲಿತಾಂಶ ಪಡೆಯುವ ಮೂಲಕ ಕೊನೆಯ ಸ್ಥಾನದಲ್ಲಿದೆ. ದೆಹಲಿಶೇ 80.97 ರಷ್ಟು ಫಲಿತಾಂಶ ಪಡೆಯುವ ಮೂಲಕ ಗುವಾಹಟಿಗಿಂತ ಒಂದುಸ್ಥಾನ ಮುಂದಿದೆ.

ADVERTISEMENT

ಕೆವಿಗಳ ಅತ್ಯುತ್ತಮ ಸಾಧನೆ:ಕೇಂದ್ರೀಯ ವಿದ್ಯಾಲಯಗಳು (ಕೆವಿ) ಇತರೆ ಶಾಲೆಗಳಿಗಿಂತ ಅತ್ಯುತ್ತಮ ಸಾಧನೆ ಮಾಡಿವೆ. ಜವಾಹರ ನವೋದಯ ವಿದ್ಯಾಲಯಗಳ (ಜೆಎನ್‌ವಿ) ಫಲಿತಾಂಶ ಸಹ ಶೇ 98.57 ರಷ್ಟಾಗಿದೆ. ಖಾಸಗಿ ಶಾಲೆಗಳ ಫಲಿತಾಂಶ ಶೇ 94.15 ರಷ್ಟಾಗಿದೆ. ಸರ್ಕಾರದ ಇತರೆ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಫಲಿತಾಂಶ ಕ್ರಮವಾಗಿ ಶೇ. 71.91 ಹಾಗೂ ಶೇ 76.95 ರಷ್ಟಾಗಿದೆ.

ಹೆಮ್ಮೆ ಪಟ್ಟ ಸಚಿವೆ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶೇ 82 ರಷ್ಟು ಅಂಕಗಳನ್ನು ಪಡೆದಿದ್ದಾರೆ. ಕಳೆದ ವಾರ ಪ್ರಕಟಗೊಂಡಿದ್ದ 12ನೇ ತರಗತಿ ಫಲಿತಾಂಶದಲ್ಲೂ ಅವರ ಪುತ್ರ ಉತ್ತಮ ಸಾಧನೆ ಮಾಡಿದ್ದರು.

ಚೆನ್ನೈ ವಲಯಕ್ಕೆ ಗರಿಷ್ಠ ಅಂಕಗಳಿಸಿದಗ್ರಾಮೀಣ ಬಾಲಕ

ತಾಯಿ ನೇತ್ರಾವತಿ, ಅಕ್ಕ ದೀಕ್ಷಿತಾ ಅವರೊಂದಿಗೆ ವಿದ್ಯಾರ್ಥಿ ಡಿ.ಯಶಸ್.

ಹುಳಿಯಾರು (ಚಿಕ್ಕನಾಯಕನಹಳ್ಳಿ ತಾ.): ಸಿಬಿಎಸ್‌ಸಿ ಚೆನ್ನೈ ವಲಯದ ಶಾಲೆಗಳಲ್ಲಿಯೇ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿರುವ ‘ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ಸ್ಕೂಲ್‌’ನ ವಿದ್ಯಾರ್ಥಿ ಡಿ.ಯಶಸ್ ಎಸ್ಸೆಸ್ಸೆಲ್ಸಿಯಲ್ಲಿ 500ಕ್ಕೆ 498 ಅಂಕಗಳನ್ನು ಪಡೆದಿದ್ದಾರೆ.

ಕೇವಲ ರಾಜ್ಯಮಟ್ಟಕ್ಕೆ ಮಾತ್ರ ಅಲ್ಲ. ಚೆನ್ನೈ ವಲಯದ ಶಾಲೆಗಳಲ್ಲಿಯೇ ಈ ಗ್ರಾಮೀಣ ಭಾಗದ ವಿದ್ಯಾರ್ಥಿ ಗರಿಷ್ಠ ಅಂಕಗಳಿಸಿ ಬೆರಗುಗೊಳಿಸಿದ್ದಾರೆ. ಅಲ್ಲದೇ ರಾಜ್ಯಕ್ಕೆ ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಶೈಕ್ಷಣಿಕ ಜಿಲ್ಲೆಯ ಹೆಗ್ಗಳಿಕೆಯ ತುಮಕೂರು ಜಿಲ್ಲೆಯು ಈ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆಯಲ್ಲಿ ಹಿನ್ನಡೆ ಕಂಡಿತ್ತು. ಈ ಬಾಲಕ ಸಿಬಿಎಸ್‌ಸಿ ಚೆನ್ನೈ ವಲಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯ (ಕಾಯಿ ತಿಮ್ಮನಹಳ್ಳಿ) ದೇವರಾಜ್ ಮತ್ತು ನೇತ್ರಾವತಿ ದಂಪತಿಯ ಪುತ್ರ ಯಶಸ್‌. ಕೃಷಿಯೇ ಕುಟುಂಬಕ್ಕೆ ಆಧಾರ. ಯಶಸ್ ತಂದೆ ದೇವರಾಜ್ ಅನಾರೋಗ್ಯದಲ್ಲಿದ್ದು, ಆತನ ಅಕ್ಕ ದೀಕ್ಷಿತಾ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

ತಾಯಿ, ಶಿಕ್ಷಕರ ಪ್ರೋತ್ಸಾಹದಿಂದ ಉತ್ತಮ ಅಂಕ: ಗಿರಿಜಾ

ಧಾರವಾಡ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 500ಕ್ಕೆ 497 ಅಂಕ ಪಡೆಯುವ ಮೂಲಕ ಗಿರಿಜಾ ಹೆಗಡೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದ್ದಾಳೆ. ನಿರೀಕ್ಷಿಸಿದಷ್ಟು ಫಲಿತಾಂಶ ಬಂದ ಖುಷಿಯಲ್ಲಿರುವಗಿರಿಜಾ ಮುಂದೆ ವಿಜ್ಞಾನಿ ಆಗಬೇಕೆಂಬ ಗುರಿ ಹೊಂದಿದ್ದಾಳೆ.

ತಂದೆ ಮಂಜುನಾಥ ಹೆಗಡೆ, ತಂಗಿ ಪಾವನಿ ಹೆಗಡೆ ಮತ್ತು ತಾಯಿ ತುಂಗಾ ಹೆಗಡೆ ಅವರೊಂದಿಗೆ ಗಿರಿಜಾ ಹೆಗಡೆ (ಮಧ್ಯದಲ್ಲಿ)

ಇಲ್ಲಿನ ಜೆಎಸ್‌ಎಸ್ಮಂಜುನಾಥೇಶ್ವರ ಸೆಂಟ್ರಲ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ ಗಿರಿಜಾ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ. ಸಂಸ್ಕೃತದಲ್ಲಿ 99 ಹಾಗೂ ಇಂಗ್ಲಿಷ್‌ನಲ್ಲಿ 98 ಅಂಕ ಗಳಿಸಿದ್ದಾಳೆ.

‘ನನ್ನ ಈ ಸಾಧನೆಗೆ ತಂದೆ ಮಂಜುನಾಥ ಹೆಗಡೆ, ತಾಯಿ ತುಂಗಾ ಹೆಗಡೆ ಮತ್ತು ಶಿಕ್ಷಕರ ಪ್ರೋತ್ಸಾಹವೇ ಕಾರಣ. ಶಾಲೆಯಲ್ಲಿ ಮಾಡುತ್ತಿದ್ದ ಪಾಠಗಳನ್ನು ಅಂದಿನ ದಿನವೇ ಕಲಿಯುತ್ತಿದ್ದೆ. ಪರೀಕ್ಷೆಗೆ ತಯಾರಿ ನಡೆಸುತ್ತಲೇ ಆಸಕ್ತಿಯ ಕ್ಷೇತ್ರಗಳಾದ ಗಾಯನ, ಭರತನಾಟ್ಯ ಮತ್ತು ಚಿತ್ರಕಲೆಯ ಅಭ್ಯಾಸದಲ್ಲೂ ತೊಡಗಿದೆ. ಇವು ಒತ್ತಡ ನಿವಾರಣೆಗೆ ಅನುಕೂಲವಾಗಿದ್ದು ಮಾತ್ರವಲ್ಲ, ಏಕಾಗ್ರತೆಯನ್ನೂ ಹೆಚ್ಚಿಸಿದವು’ ಎಂದು ಗಿರಿಜಾ ಹೇಳಿದಳು.

‘ಮುಂದೆ ವಿಜ್ಞಾನಿ ಆಗಬೇಕು ಎಂಬ ಗುರಿ ಹೊಂದಿದ್ದೇನೆ. ಅದಕ್ಕಾಗಿ ಈಗಲೇ ಐಐಟಿ ಮತ್ತು ನೀಟ್ ಪ್ರವೇಶ ಪರೀಕ್ಷೆಗೆ ವಿಶೇಷ ತರಬೇತಿ ಪಡೆಯುತ್ತಿದ್ದೇನೆ’ ಎಂದಳು.

ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ತೋಟಗಾರಿಕಾ ವಿಭಾಗದಲ್ಲಿ ಮುಖ್ಯಸ್ಥರಾಗಿರುವ ಮಂಜುನಾಥ ಹೆಗಡೆ ಅವರು ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.

‘ಗಿರಿಜಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ್, ಉಚಿತ ಶಿಕ್ಷಣದ ಭರವಸೆ ನೀಡಿದ್ದಾರೆ’ ಎಂದು ತುಂಗಾ ಹೆಗಡೆ ತಿಳಿಸಿದರು.

ಶಿವಳ್ಳಿ ಪುತ್ರಿಗೆ ಶೇ 76ರಷ್ಟು ಅಂಕ

ಹುಬ್ಬಳ್ಳಿ: ಸಚಿವರಾಗಿದ್ದಾಗಲೇ ನಿಧನರಾದ ಸಚಿವ ಸಿ.ಎಸ್‌.ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ, ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 76 (380) ರಷ್ಟು ಅಂಕ ಗಳಿಸಿದ್ದಾಳೆ. ಅಪ್ಪನ ಕಳೇಬರ ಮನೆಯಲ್ಲಿದ್ದಾಗಲೇ ಶಾಲೆಗೆ ಹೋಗಿ ಇಂಗ್ಲಿಷ್‌ ಪರೀಕ್ಷೆ ಬರೆದಿದ್ದ ಬಾಲಕಿ, ಬಳಿಕ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದಳು.

‘ನಾನು ಜಿಲ್ಲಾಧಿಕಾರಿ ಆಗಬೇಕೆಂಬುದು ಅಪ್ಪನ ಆಸೆಯಾಗಿತ್ತು. ನನಸಾಗಿಸಬೇಕೆಂಬ ಹಟ, ಅವರ ಅಂತಿಮ ಕ್ರಿಯಾಕರ್ಮದ ದಿನವೂ ಪರೀಕ್ಷೆ ಬರೆಯುವ ಮನೋಸ್ಥೈರ್ಯ ನೀಡಿತು. ದುಃಖ ಬಲಹೀನಗೊಳಿಸುತ್ತಿತ್ತು. ಅಪ್ಪನ ಆಸೆ, ಧೈರ್ಯ ತುಂಬಿತ್ತು’ ಎಂದು ಆ ದಿನವನ್ನು ನೆನಪಿಸಿಕೊಂಡರು ರೂಪಾ.

ಗೋಕುಲ ರಸ್ತೆಯ ಮಂಜುನಾಥ ನಗರದ ಕೆಎಲ್‌ಇ ಇಂಗ್ಲೀಷ್‌ ಮೀಡಿಯಂ ಶಾಲೆಯಲ್ಲಿ ಓದಿದ್ದಾಳೆ.

* ತಂದೆಯ ಕನಸು ನಾನು ಡಿ.ಸಿ ಆಗಬೇಕು ಎನ್ನುವುದು, ಸಾವಿನ ಹಿಂದಿನ ದಿನವೇ ನನಗೆ ವಿಷ್‌ ಮಾಡಿರುವುದೇ ನನಗೆ ಮತ್ತೆ ಮತ್ತೆ ಅಪ್ಪನ ನೆನಪು ತರಿಸುತ್ತದೆ.- ರೂಪ ಶಿವಳ್ಳಿ

ಸಾಧಕರ ಸಾಧನೆಗೆ ಹಲವು ಕಾರಣಗಳು

ನಾನು ಪ್ರತಿ ದಿನ ಓದುತ್ತಿದ್ದುದು ಎರಡೇ ಗಂಟೆಹಾಗೂ ಟ್ಯೂಷನ್‌ಗೂ ಹೋಗುತ್ತಿರಲಿಲ್ಲ.ಸೆಮಿಸ್ಟರ್‌ನಲ್ಲಿ 497 ಅಂಕ ಗಳಿಸಿದ್ದೆ. ನನಗಿದ್ದ ಒಂದೇ ಗುರಿ, ಅದೇನೆಂದರೆ ಈ ಅಂಕವನ್ನು ಮೀರಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದಾಗಿತ್ತು. ಓದುವ ಹವ್ಯಾಸ ಇಟ್ಟುಕೊಂಡಿದ್ದ, ವೈದ್ಯನಾಗಬೇಕು ಎಂಬ ಕನಸು ಇದೆ.

– ಕೆ.ವಿ.ಪ್ರಣವ್‌,ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಜೆಪಿ ನಗರ

ನನ್ನ ಈ ಸಾಧನೆಗೆ ಕಠಿಣ ಪರಿಶ್ರಮವೇ ಕಾರಣ. ನಿತ್ಯವೂ 6 ರಿಂದ 8 ಗಂಟೆ ಓದುತ್ತಿದ್ದೆ. ಯಾವುದೇ ಒಂದು ವಿಷಯವಾಗಲಿ ಪುನರಾವರ್ತಿ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಟ್ಯೂಷನ್‌ಗೆ ಹೋಗಲಿಲ್ಲ. ಭಾರತೀಯ ಪುರಾಣಗಳು ಮತ್ತು ವಿಜ್ಞಾನದ ಕಾದಂಬರಿಗಳನ್ನು ಓದುವುದೆಂದರೆ ತುಂಬಾ ಇಷ್ಟ. ಮುಂದೆ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶವಿದೆ’.

– ದಿಶಾ ಚೌಧರಿ,ಪ್ರೆಸಿಡೆನ್ಸಿ ಸ್ಕೂಲ್‌, ಬೆಂಗಳೂರು

ಪ್ರತಿದಿನ ತರಗತಿಯಲ್ಲಿ ಏನು ಬೋಧಿಸುತ್ತಿದ್ದರೊ ಅದನ್ನು ಗಮನವಿಟ್ಟು ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಕಠಿಣ ಅಭ್ಯಾಸದ ಮೂಲಕವೇ ಜ್ಞಾನ ಸಂಪಾದಿಸಬೇಕು ಎಂಬುದು ನನ್ನ ಗಟ್ಟಿ ನಂಬಿಕೆ. ನನಗೆ ಪೋಷಕರೇ ಪ್ರೇರಣೆ. ಓದುವುದು ಮತ್ತು ಚಿತ್ರ ಕಲೆ ನೆಚ್ಚಿನ ಹವ್ಯಾಸ. 2021ರಲ್ಲಿ ‘ನೀಟ್‌’ ಬರೆಯುವ ಅಥವಾ ನಾಗರಿಕ ಸೇವಾ ಪರೀಕ್ಷೆ ಬರೆಯುವ ಯೋಜನೆ ಇದೆ. ಜತೆಗೆ ಲೇಖಕಿಯಾಗಿ ಬೆಳೆಯಬೇಕು ಎಂಬ ಇಚ್ಛೆಯೂ ಇದೆ’.

– ಪೃಥ್ವಿ ಪಿ.ಶೆಣೈ,ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು

ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದೆ. ಪರೀಕ್ಷೆ ಚೆನ್ನಾಗಿ ಮಾಡಿ ಎಂದು ಪೋಷಕರು ಎಂದೂ ಒತ್ತಡ ಹಾಕುತ್ತಿರಲಿಲ್ಲ. ಪ್ರತಿನಿತ್ಯ ಧ್ಯಾನ ಮಾಡುತ್ತಿದ್ದೆ. ಕ್ವಾಂಟಂ ಫಿಸಿಕ್ಸ್‌ನಲ್ಲಿ ಉನ್ನತ ಅಧ್ಯಯನ ಮಾಡುವ ಉದ್ದೇಶವಿದೆ’.– ಐಶ್ವರ್ಯಾ ಹರಿಹರನ್‌ಅಯ್ಯರ್‌, ಪ್ರೆಸಿಡೆನ್ಸಿ ಸ್ಕೂಲ್‌, ಬೆಂಗಳೂರು

ಡಿಸೆಂಬರ್‌ನಿಂದ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಟ್ಯೂಷನ್‌ಗೆ ಹೋಗಿಲ್ಲ. ಮನೆಯಲ್ಲೇ ಅಭ್ಯಾಸ ಮಾಡಿದೆ. ಐಐಟಿಗೆ ಸೇರಬೇಕು ಎಂಬುದೇ ನನ್ನ ಗುರಿ. ಅದಕ್ಕಾಗಿ ತಯಾರಿ ನಡೆಸಿದ್ದೇನೆ. ಪಿಯುದಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳುತ್ತೇನೆ. ಐಐಟಿ ಪದವಿ ಪಡೆದ ಬಳಿಕ ಐಎಎಸ್‌ ಮಾಡಬೇಕು ಎಂಬ ಬಯಕೆ ನನ್ನದು. ಪ್ರತಿನಿತ್ಯ ಓದಿದ ಬಳಿಕ ಅಮ್ಮನ ಜತೆ ಚೆಸ್‌ ಆಡುತ್ತಿದ್ದೆ.

– ಸಿದ್ಧಾರ್ಥ,ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರ, ಬೆಂಗಳೂರು (500 ಕ್ಕೆ 494)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.