ADVERTISEMENT

ಕಳ್ಳ ಸಾಗಣೆ ಪತ್ತೆ; 9 ಯುವತಿಯರ ರಕ್ಷಣೆ

* ನಟರ ಜೊತೆಗಿನ ಫೋಟೊ ತೋರಿಸಿ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 17:25 IST
Last Updated 20 ಜುಲೈ 2020, 17:25 IST
ನಟ ವಿಜಯ್ ಜೊತೆ ಆರೋಪಿ ಬಸವರಾಜ ಕಳಸದ
ನಟ ವಿಜಯ್ ಜೊತೆ ಆರೋಪಿ ಬಸವರಾಜ ಕಳಸದ   

ಬೆಂಗಳೂರು: ರೂಪದರ್ಶಿಯನ್ನಾಗಿ ಮಾಡುವ ಹಾಗೂ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಹೊರ ದೇಶಗಳಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿಯ ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಬಸವರಾಜ ಶಂಕರಪ್ಪ ಕಳಸದ (43) ಬಂಧಿತ. ಬೆಂಗಳೂರಿನ ದೊಮ್ಮಲೂರಿನ 1ನೇ ಹಂತದಲ್ಲಿ ನೆಲೆಸಿದ್ದ ಈತನ ಕೃತ್ಯದಿಂದ ಕಷ್ಟಕ್ಕೆ ಸಿಲುಕಿದ್ದ 9 ಯುವತಿಯರನ್ನು ರಕ್ಷಿಸಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ್ದ ಆರೋಪಿ, ಖ್ಯಾತ ನಟರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದ. ಆ ಫೋಟೊಗಳನ್ನು ಯುವತಿಯರಿಗೆ ತೋರಿಸಿ ಸಿನಿಮಾಗಳಿಗೆ ನಟ–ನಟಿಯರು ಹಾಗೂ ರೂಪದರ್ಶಿಯರನ್ನು ಪರಿಚಯಿಸುವ ವ್ಯವಸ್ಥಾಪಕನೆಂದು ಹೇಳುತ್ತಿದ್ದ.’

ADVERTISEMENT

‘ಮದ್ರಾಸ್ ಕ್ಯಾಸ್ಟಿಂಗ್ಸ್–ಇಂಟರ್‌ನ್ಯಾಷನ್ ಇವೆಂಟ್’ ಎಂಬ ಕಂಪನಿ ತೆರೆದಿದ್ದ ಆರೋಪಿ, ದುಬೈ, ಅಬುದಾಬಿ, ಕೆನಡಾ, ನ್ಯೂಜಿಲೆಂಡ್ ಹಾಗೂ ಚೀನಾದಲ್ಲೂ ಕೆಲಸ ಮಾಡುವುದಾಗಿ ಹೇಳುತ್ತಿದ್ದ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ತೆಲಂಗಾಣ ರಾಜ್ಯದ ಯುವತಿಯರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ರೂಪದರ್ಶಿ ಮಾಡುವುದಾಗಿ ಹಾಗೂ ಹೊರ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸುತ್ತಿದ್ದ’ ಎಂದೂ ಸಿಸಿಬಿ ಅಧಿಕಾರಿ ಹೇಳಿದರು.

‘ಯುವತಿಯರನ್ನು ಹೊರದೇಶಕ್ಕೆ ಅಕ್ರಮವಾಗಿ ಕರೆದೊಯ್ಯುತ್ತಿದ್ದ ಆರೋಪಿ, ಅವರನ್ನು ಡ್ಯಾನ್ಸ್‌ ಬಾರ್‌ಗಳಿಗೆ ಸೇರಿಸುತ್ತಿದ್ದ. ಇದಕ್ಕಾಗಿ ಆತ ಕಮಿಷನ್ ಪಡೆಯುತ್ತಿದ್ದ. ಯುವತಿಯರನ್ನು ಕಳ್ಳ ಸಾಗಣೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ, ಹಲವು ದೇಶಗಳ ಗುರುತಿನ ಚೀಟಿಗಳನ್ನು ಇಟ್ಟುಕೊಂಡಿದ್ದ. ಅವುಗಳನ್ನು ಜಪ್ತಿ ಮಾಡಲಾಗಿದೆ’

‘ಆರೋಪಿಯನ್ನು ಬಂಧಿಸಿ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ. ಅದರ ವರದಿ ಬಂದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆರೋಪಿಯಿಂದ ಯಾರಿಗಾದರೂ ವಂಚನೆ ಆಗಿದ್ದರೆ ಸಿಸಿಬಿಗೆ ದೂರು ನೀಡಬಹುದು’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.