ADVERTISEMENT

ಡ್ಯಾನ್ಸ್‌ಬಾರ್‌ ಮೇಲೆ ಸಿಸಿಬಿ ದಾಳಿ: 64 ಮಹಿಳೆಯರ ರಕ್ಷಣೆ

9 ಆರೋಪಿಗಳ ಬಂಧನ: ₹1.32 ಲಕ್ಷ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 19:00 IST
Last Updated 10 ಮಾರ್ಚ್ 2022, 19:00 IST
   

ಬೆಂಗಳೂರು: ಗಾಂಧಿನಗರದ 5ನೇ ಮುಖ್ಯರಸ್ತೆಯಲ್ಲಿರುವ ಮೂಡ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮೇಲೆ ದಾಳಿ ನಡೆಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದವರು 64 ಮಹಿಳೆಯರನ್ನು ರಕ್ಷಿಸಿದ್ದಾರೆ. ಇವರಿಂದ ಅಶ್ಲೀಲ ನೃತ್ಯ ಮಾಡಿಸಿ ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದ ಆರೋಪದಡಿ 9 ಮಂದಿಯನ್ನು ಬಂಧಿಸಿದ್ದಾರೆ.

‘ಮೂಡ್‌ ಬಾರ್‌ನ ಮಾಲೀಕರು ಮಹಿಳೆಯರ ನೃತ್ಯ ಹಾಗೂ ಡಿಜೆ ಬಳಕೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ. ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದಿದ್ದ ಅವರು ಗ್ರಾಹಕರು ಅವರ ಮೇಲೆ ಹಣ ಎಸೆಯುವಂತೆ ಪ್ರಚೋದಿಸುತ್ತಿದ್ದರು. ಆ ಮೂಲಕ ಅಕ್ರಮವಾಗಿ ಆದಾಯ ಗಳಿಸುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಾಲೀಕರು ಅನುಮತಿ ಇಲ್ಲದೆ ಡ್ಯಾನ್ಸ್‌ ಬಾರ್‌ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇದರ ಆಧಾರದಲ್ಲಿ ದಾಳಿ ನಡೆಸಿ ಮಹಾರಾಷ್ಟ್ರ ಹಾಗೂ ಪಂಜಾಬ್‌ನ ತಲಾ 8, ದೆಹಲಿಯ 6, ರಾಜಸ್ತಾನದ 13, ಮಧ್ಯಪ್ರದೇಶದ 3, ಉತ್ತರಾಖಂಡ ಹಾಗೂ ಪಶ್ಚಿಮ ಬಂಗಾಳದ ತಲಾ 2, ಉತ್ತರ ಪ್ರದೇಶದ 5 ಮತ್ತು ಕರ್ನಾಟಕದ 17 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿಯ ವೇಳೆ ಬಾರ್‌ನಲ್ಲಿ 74 ಮಂದಿ ಗ್ರಾಹಕರಿದ್ದರು. ಅವರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಅಕ್ರಮವಾಗಿ ಡ್ಯಾನ್ಸ್‌ ಬಾರ್‌ ನಡೆಸುತ್ತಿದ್ದ 6 ಮಂದಿ ಹಾಗೂ ಮೂವರು ಕೆಲಸಗಾರರನ್ನು ಬಂಧಿಸಲಾಗಿದೆ. ದಾಳಿ ವೇಳೆ ₹1.32 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂಡ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಪರವಾನಗಿ ರದ್ದು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.