ADVERTISEMENT

ಮಾನಹಾನಿ: ತಡೆಯಾಜ್ಞೆ ತಂದ ರೇಣುಕಾಚಾರ್ಯ- ಕೇಂದ್ರ ಸರ್ಕಾರದ ಪಿಐಬಿಯೂ ಪ್ರತಿವಾದಿ!

ಕೇಂದ್ರ ಸರ್ಕಾರದ ಪಿಐಬಿಯೂ ಪ್ರತಿವಾದಿ!

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 20:11 IST
Last Updated 30 ಜುಲೈ 2021, 20:11 IST
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ   

ಬೆಂಗಳೂರು: ಯಾವುದೇ ಸಿ.ಡಿ ಅಥವಾ ಮಾಹಿತಿಯ ಆಧಾರದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಮಾನಹಾನಿಕರ ವರದಿ ಪ್ರಕಟಿಸಬಾರದು ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾಧ್ಯಮಗಳ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ಪಡೆದುಕೊಂಡಿದ್ದಾರೆ.

ಸಿ.ಡಿ ಒಂದನ್ನು ಬಳಸಿಕೊಂಡು ತಮ್ಮ ವಿರುದ್ಧ ವರದಿ ಪ್ರಕಟಿಸಲು ಸಂಚು ನಡೆದಿದ್ದು, ಇದರಿಂದ ತಮ್ಮ ವರ್ಚಸ್ಸಿಗೆ ಕುಂದುಂಟಾಗಲಿದೆ ಎಂದು ದೂರಿ ರೇಣುಕಾಚಾರ್ಯ ಅವರು ನಗರದ 20ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜುಲೈ 26ರಂದು ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿಗಳ ಗೈರಿನಲ್ಲೇ ನ್ಯಾಯಾಲಯವು ಜುಲೈ 28ರಂದು ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿದೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ದಿನಪತ್ರಿಕೆಗಳು, ಸಂಜೆ ಪತ್ರಿಕೆಗಳು, ಸುದ್ದಿ ವಾಹಿನಿಗಳು, ವೆಬ್‌ ಸೈಟ್‌ಗಳು, ಫೇಸ್‌ ಬುಕ್‌ ಪುಟಗಳು, ಯೂ ಟ್ಯೂಬ್‌ ಚಾನೆಲ್‌ಗಳು, ಟ್ವಿಟರ್‌ ಸೇರಿದಂತೆ 71 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಮಾಹಿತಿ ಬ್ಯೂರೊ (ಪಿಐಬಿ) ಅನ್ನೂ ಪ್ರತಿವಾದಿ ಎಂದು ಅರ್ಜಿಯಲ್ಲಿ ಹೆಸರಿಸಲಾಗಿದೆ.

ADVERTISEMENT

‘ಸಿ.ಡಿ ಆಧಾರದಲ್ಲಿ ಮಾನಹಾನಿಕರ ವರದಿ ಪ್ರಕಟಿಸುವ ಸಾಧ್ಯತೆ ಇದೆ. ಜುಲೈ 21ರಂದು ಕೆಲವು ಮಾಧ್ಯಮಗಳು ಈ ಕುರಿತು ತಮ್ಮ ಹೆಸರನ್ನು ಉಲ್ಲೇಖಿಸಿ ವರದಿ ಮಾಡಿವೆ. ಪ್ರತಿವಾದಿಗಳು ತಮ್ಮ ತೇಜೋವಧೆ ಮಾಡುವ ಸಾಧ್ಯತೆ ಇದೆ. ಸಿ.ಡಿ ಆಧಾರದಲ್ಲಿ ವರದಿ ಪ್ರಕಟವಾದರೆ ಅಥವಾ ಪ್ರಸಾರ ಮಾಡಿದರೆ ಸಾರ್ವಜನಿಕ ಜೀವನದಲ್ಲಿರುವ ತಮ್ಮ ವ್ಯಕ್ತಿತ್ವದ ಘನತೆಗೆ ಧಕ್ಕೆಯಾಗಲಿದೆ’ ರೇಣುಕಾಚಾರ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ 20ನೇ ಹೆಚ್ಚುವರಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಬಿ. ಪಾಟೀಲ್‌ ಅವರು ಮಧ್ಯಂತರ ಪ್ರತಿಬಂಧಕಾಜ್ಞೆ ನೀಡಿ ಜುಲೈ 28ರಂದು ಆದೇಶ ಹೊರಡಿಸಿದ್ದಾರೆ.

ತಮ್ಮ ವಿರುದ್ಧ ಷಡ್ಯಂತ್ರ

ತಮ್ಮ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಮಹಾನುಭಾವರೊಬ್ಬರು ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಬಳಿ ಏನು ಹೇಳಿದ್ದರು ಎಂಬುದು ಗೊತ್ತಿದೆ ಎಂದು ರೇಣುಕಾಚಾರ್ಯ, ಯಾರ ಹೆಸರನ್ನೂ ಉಲ್ಲೇಖಿಸದೆ ಆರೋಪಿಸಿದರು.

ಪ್ರತಿಬಂಧಕಾಜ್ಞೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಡೆಯುವ ಮನುಷ್ಯ ಎಡುವುವುದು ಸಹಜ. ನಾನು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಕೇಳಬೇಕಾದವರು ನನ್ನ ಕುಟುಂಬದವರು’ ಎಂದರು.

‘ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ, ತಂತ್ರಜ್ಞಾನದ ಯುಗದಲ್ಲಿ ಗ್ರಾಫಿಕ್‌ ಬಳಸಿ ಏನಾದರೂ ಸೃಷ್ಟಿಸಬಹುದು. ರೇಣುಕಾಚಾರ್ಯ ಸಿ.ಡಿ ಇದೆ ಎಂದು ಮಹಾನುಭಾವನೊಬ್ಬ ‘ಬ್ಲಾಕ್‌ಮೇಲ್‌’ ಮಾಡುತ್ತಿದ್ದಾರೆ. ಅದಕ್ಕೆಲ್ಲ ನಾನು ಬಗ್ಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.