ನವದೆಹಲಿ: ಹುಲಿಗಳ ವಾಸಕ್ಕೆ ಪೂರಕ ವಾತಾವರಣ ಹೊಂದಿರುವ ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಐದು ಹುಲಿಗಳ ಸಾವಿನ ಪ್ರಕರಣದ ಬಗ್ಗೆ ಸಮಿತಿ ತನಿಖೆ ನಡೆಸಿ 55 ಪುಟಗಳ ವರದಿ ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಪಶ್ಚಿಮ ಘಟ್ಟದಲ್ಲಿ ಪದೇ ಪದೇ ಸಂಭವಿಸುತ್ತಿರುವ ಇಂತಹ ಘಟನೆಗಳಿಂದಾಗಿ ಹುಲಿಗಳ ಸಂರಕ್ಷಣೆ ಕುರಿತು ಗಂಭೀರ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಸಮಿತಿ ಸಲಹೆ ನೀಡಿದೆ.
ಮಹದೇಶ್ವರ ಬೆಟ್ಟ, ಹನೂರು ಹಾಗೂ ಯಡೆಯಾರಳ್ಳಿ ಮೀಸಲು ರಕ್ಷಿತಾರಣ್ಯವನ್ನು ಒಟ್ಟುಗೂಡಿಸಿ 906 ಚ.ಕಿ.ಮೀ ಅರಣ್ಯವನ್ನು ಮಲೆಮಹದೇಶ್ವರ ವನ್ಯಜೀವಿ ಧಾಮ ಎಂದು 2013ರಲ್ಲಿ ಘೋಷಿಸಲಾಗಿತ್ತು. ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಅರಣ್ಯ ಇಲಾಖೆ 2017–18ರಲ್ಲಿ ಪ್ರಸ್ತಾವ ಕಳುಹಿಸಿತ್ತು. ಈ ಪ್ರಸ್ತಾವಕ್ಕೆ ರಾಜ್ಯ ವನ್ಯಜೀವಿ ಮಂಡಳಿ 2019ರಲ್ಲಿ ಅನುಮೋದನೆ ನೀಡಿತ್ತು.
ವನ್ಯಧಾಮದಲ್ಲಿರುವ ಗ್ರಾಮಗಳು, ವಸತಿ ಪ್ರದೇಶಗಳ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚಿಸಿ ಪ್ರಾಧಿಕಾರವು ಪ್ರಸ್ತಾವ ವಾಪಸ್ ಕಳುಹಿಸಿತ್ತು. ಆ ಬಳಿಕ, ಅರಣ್ಯ ಇಲಾಖೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು. ಘೋಷಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡಿದ್ದವು. ಜನಪ್ರತಿನಿಧಿಗಳ ವಿರೋಧದಿಂದಾಗಿ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಎನ್‌ಟಿಸಿಎ ವಿಶೇಷ ತನಿಖಾ ತಂಡವು ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಶಿಫಾರಸು ಮಾಡಿತ್ತು. ಇದೀಗ, ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.