ADVERTISEMENT

ಅರಣ್ಯದಂಚಿನಲ್ಲಿ ಕಾಡಾನೆ ತಡೆಗೆ ಸಿಮೆಂಟ್ ಪಿಲ್ಲರ್ ತಡೆಗೋಡೆ ಪ್ರಯೋಗ ಯಶಸ್ವಿ

ಎಚ್ ಎಸ್ ಚರಣ್
Published 3 ಏಪ್ರಿಲ್ 2023, 21:34 IST
Last Updated 3 ಏಪ್ರಿಲ್ 2023, 21:34 IST
ಕೊಡಗು ಜಿಲ್ಲೆಯ ಶನಿವಾರಸಂತೆ ವ್ಯಾಪ್ತಿಯ ಹಿರಿಕರ ಗ್ರಾಮದ ಅರಣ್ಯ ಅಂಚಿನಲ್ಲಿ ಕಾಡಾನೆ, ಕಾಟಿಗಳ ನಿಯಂತ್ರಣಕ್ಕಾಗಿ ನಿರ್ಮಿಸಿರುವ ಸಿಮೆಂಟ್ ಪಿಲ್ಲರ್ ತಡೆಗೋಡೆ
ಕೊಡಗು ಜಿಲ್ಲೆಯ ಶನಿವಾರಸಂತೆ ವ್ಯಾಪ್ತಿಯ ಹಿರಿಕರ ಗ್ರಾಮದ ಅರಣ್ಯ ಅಂಚಿನಲ್ಲಿ ಕಾಡಾನೆ, ಕಾಟಿಗಳ ನಿಯಂತ್ರಣಕ್ಕಾಗಿ ನಿರ್ಮಿಸಿರುವ ಸಿಮೆಂಟ್ ಪಿಲ್ಲರ್ ತಡೆಗೋಡೆ   

ಶನಿವಾರಸಂತೆ (ಕೊಡಗು ಜಿಲ್ಲೆ): ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿರಿಕರ ಗ್ರಾಮದಲ್ಲಿ ಕಾಡಾನೆಗಳು ಊರೊಳಗೆ ಬರುವುದನ್ನು ತಡೆಯಲು ಅರಣ್ಯ ಇಲಾಖೆಯು ಸಿಮೆಂಟ್ ಪಿಲ್ಲರ್ ತಡೆಗೋಡೆ ನಿರ್ಮಾಣದ ಪ್ರಯೋಗ ಮಾಡಿದೆ.

2.25 ಮೀಟರ್ ಎತ್ತರ ಹಾಗೂ 75 ಮೀಟರ್ ಉದ್ದದ ಈ ತಡೆಗೋಡೆಗೆ ₹16 ಲಕ್ಷ ವೆಚ್ಚ ಮಾಡಲಾಗಿದೆ. ನಿರ್ಮಾಣವಾಗಿ ಒಂದು ತಿಂಗಳು ಕಳೆದಿದ್ದು, ಆನೆಗಳು ಊರಿನೊಳಗೆ ನುಸುಳಿಲ್ಲ ಎನ್ನುತ್ತಾರೆ ಅಧಿಕಾರಿಗಳು.

‘ಇಲ್ಲಿ ಕಾಡಾನೆಗಳ ಜೊತೆಗೆ, ಕಾಟಿಗಳ ಹಾವಳಿಯೂ ಇದೆ. ಈ ತಡೆಗೋಡೆಯು ಇವುಗಳನ್ನು ತಡೆಯುವಲ್ಲಿಯೂ ಯಶಸ್ವಿಯಾಗಿದೆ’ ಎಂದು ಹಿರಿಕರ ಗ್ರಾಮದ ನಿವಾಸಿ ಎಚ್.ಎಸ್.ರಕ್ಷಿತ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇಲ್ಲಿನ ಹಿರಿಕರ, ಚಿಕ್ಕಾರ, ಕೂಗೂರು ಮೊದಲಾದ ಗ್ರಾಮಗಳ ರೈತರು ಕಾಡಾನೆ ಉಪಟಳದಿಂದ ಕಂಗೆಟ್ಟಿದ್ದರು. ಮಾಲಂಬಿ ಮೀಸಲು ಅರಣ್ಯದಿಂದ ಹಿರಿಕರ ಗ್ರಾಮದ ಮೂಲಕ ಬರುತ್ತಿದ್ದ ಕಾಡಾನೆಗಳು, ಕಾಟಿಗಳು ಅಕ್ಕಪಕ್ಕದ ಗ್ರಾಮಗಳಲ್ಲಿ ಬೀಡುಬಿಟ್ಟು, ತೋಟ–ಗದ್ದೆಗಳಿಗೆ ನುಗ್ಗಿ ಫಸಲನ್ನು ಧ್ವಂಸಗೊಳಿಸುತ್ತಿದ್ದವು. ಇದರಿಂದ ನಷ್ಟ ಉಂಟಾಗುತ್ತಿತ್ತು.

ಇದಕ್ಕಾಗಿ, ಹಿರಿಕರ ಗ್ರಾಮದಲ್ಲಿ ರೈತ ಮಹಿಳೆ ಶಶಿಕಲಾ ಸಣ್ಣಸ್ವಾಮಿ ಅವರ ತೋಟದ ಅಂಚಿನಲ್ಲಿ ಮಾಲಂಬಿ ಮೀಸಲು ಅರಣ್ಯದಿಂದ ಕಾಡಾನೆಗಳು ಬರುವ ಸ್ಥಳದಲ್ಲಿ ಕಂದಕ ನಿರ್ಮಾಣ ಮಾಡಲಾಗಿತ್ತು. ಆದರೆ, ಕ್ರಮೇಣ ಕಂದಕದಲ್ಲಿ ಮಣ್ಣು ಕುಸಿಯಿತು. ಕಾಡಾನೆಗಳು ಕಂದಕ ದಾಟಿ ಎಂದಿನಂತೆ ಗ್ರಾಮದೊಳಕ್ಕೆ ಬರಲಾರಂಭಿಸಿದ್ದವು. ಹೀಗಾಗಿ, ಇಲಾಖೆಯು ಸಿಮೆಂಟ್ ಪಿಲ್ಲರ್ ತಡೆಗೋಡೆ ನಿರ್ಮಿಸಿದೆ.

ಶನಿವಾರಸಂತೆಯ ವಲಯ ಅರಣ್ಯಾಧಿಕಾರಿ ಪಿ.ಪ್ರಫುಲ್‌ ಶೆಟ್ಟಿ ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ, ‘ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ಮಾಕುಟ್ಟ ಭಾಗದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿದ್ದು, ಅಲ್ಲಿ ಯಶಸ್ವಿಯಾಗಿದೆ.
ಇಲ್ಲೂ ಪ್ರಾಯೋಗಿಕವಾಗಿ 75 ಮೀಟರ್‌ವರೆಗೆ ನಿರ್ಮಿಸಲಾಗಿದೆ. ಆನೆಗಳು ಈ ತಡೆಗೋಡೆ ಉರುಳಿಸಲು ಸಾಧ್ಯವಿಲ್ಲ. ಸದ್ಯ, ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದಿದೆ. ಆನೆ, ಕಾಟಿಗಳು ತಡೆಗೋಡೆಯನ್ನು ದಾಟಿಲ್ಲ. ವೆಚ್ಚವೂ ಹೆಚ್ಚಾಗುವುದಿಲ್ಲ’ ಎಂದು ಹೇಳಿದರು.

‘ಕೂಗೂರು, ಚಿಕ್ಕಾರ ಗ್ರಾಮದ ಹಲವೆಡೆ ಇಂತಹ ತಡೆಗೋಡೆನಿರ್ಮಿಸಲು ಚಿಂತಿಸಲಾಗಿದೆ. ಇಲಾಖೆ ಅನುಮತಿ ನೀಡಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು’ ಎನ್ನುತ್ತಾರೆ ಅವರು.

ಕಾಡಾನೆಗಳ ನಿಯಂತ್ರಣಕ್ಕೆ ವಿನೂತನ ಯೋಜನೆ

ಸಿಮೆಂಟ್ ಪಿಲ್ಲರ್ ತಡೆಗೋಡೆ ಉರುಳಿಸುವುದು ಕಷ್ಟ

ಕಂದಕಕ್ಕಿಂತ ಇದು ಪ್ರಯೋಜನಕಾರಿ: ಅಧಿಕಾರಿಗಳ ಅಭಿಪ್ರಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.