ಜಾನುವಾರು
ನವದೆಹಲಿ: ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ (ಎಲ್‌ಎಚ್‌ಡಿಸಿಪಿ) ಬದಲಾವಣೆ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಕಾರ್ಯಕ್ರಮದಡಿ ರೈತರಿಗೆ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ಜೆನೆರಿಕ್ ಪಶು ವೈದ್ಯಕೀಯ ಔಷಧಿ ವಿತರಿಸಲಾಗುತ್ತದೆ. ಈ ಯೋಜನೆಗೆ 2024-25 ಮತ್ತು 2025-26ರಲ್ಲಿ ₹3,880 ಕೋಟಿ ಒದಗಿಸಲಾಗುವುದು ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವನ್ನು ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ. ಯೋಜನೆಯ ಪಶು ಔಷಧಿ ಘಟಕದಡಿಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲಾಗುವುದು. ಪಶು ಔಷಧಿಯು ಜನೌಷಧಿ ಯೋಜನೆಯಂತೆಯೇ ಇರುತ್ತದೆ. ಜೆನೆರಿಕ್ ಪಶುವೈದ್ಯಕೀಯ ಔಷಧಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ವಿತರಿಸಲಾಗುವುದು’ ಎಂದು ಅವರು ಹೇಳಿದರು.
ಜೆನೆರಿಕ್ ಪಶುವೈದ್ಯಕೀಯ ಔಷಧಿ ಪೂರೈಸಲು ಮತ್ತು ಪಶು ಔಷಧಿ ಘಟಕದ ಅಡಿಯಲ್ಲಿ ಔಷಧಿಗಳ ಮಾರಾಟಕ್ಕೆ ಪ್ರೋತ್ಸಾಹಧನ ನೀಡಲು ₹75 ಕೋಟಿ ಒದಗಿಸಲಾಗುತ್ತದೆ ಎಂದರು.
‘ಈ ಯೋಜನೆಯು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ, ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಮತ್ತು ಪಶು ಔಷಧಿ ಘಟಕಗಳನ್ನು ಒಳಗೊಂಡಿದೆ. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಮೂಲಕ ಕಾಲುಬಾಯಿ ರೋಗ ಸೇರಿದಂತೆ ವಿವಿಧ ಕಾಯಿಲೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳು ಕಾಲುಬಾಯಿ ರೋಗ ಮುಕ್ತವೆಂದು ಘೋಷಿಸಲು ಸಿದ್ಧವಾಗಿದೆ’ ಎಂದು ಅವರು ತಿಳಿಸಿದರು.
ಕೇದರನಾಥಕ್ಕೆ ರೋಪ್‌ವೇ:
‘ಉತ್ತರಾಖಂಡದಲ್ಲಿ ಎರಡು ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ₹4,081 ಕೋಟಿ ವೆಚ್ಚದಲ್ಲಿ ಸೋನ್‌ಪ್ರಯಾಗ್‌ನಿಂದ ಕೇದಾರನಾಥಕ್ಕೆ (12.9 ಕಿಮೀ) ಮತ್ತು ₹2,730 ಕೋಟಿ ವೆಚ್ಚದಲ್ಲಿ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್ ಜಿ (12.4 ಕಿಮೀ) ವರೆಗೆ ರೋಪ್‌ವೇ ನಿರ್ಮಿಸಲಾಗುವುದು. ಇವುಗಳ ಕಾಮಗಾರಿ 4-6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಪ್ರಸ್ತುತ ಈ ಪ್ರದೇಶಗಳಿಗೆ ಕಾಲ್ನಡಿಗೆ, ಕುದುರೆ, ಪಲ್ಲಕ್ಕಿ ಅಥವಾ ಹೆಲಿಕಾಪ್ಟರ್ ಮೂಲಕ ಯಾತ್ರಾರ್ಥಿಗಳು ಸಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.