ADVERTISEMENT

ಕೇಂದ್ರ ದಿಂದ ₹4,195 ಕೋಟಿ ಬಾಕಿ; ಸಂಸದರು ಒತ್ತಡ ಹೇರಬೇಕು: ಸಿಎಂ ಸಲಹೆ

ಹಣ ಬಿಡುಗಡೆಗೆ ಒತ್ತಡ ಹೇರಲು ಸಂಸದರಿಗೆ ಸಿ.ಎಂ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡಬೇಕಿರುವ ₹4,195 ಕೋಟಿ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬುಧವಾರ ನಡೆದ ರಾಜ್ಯಮಟ್ಟದ ‘ದಿಶಾ’ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ADVERTISEMENT

2024-25ನೇ ಸಾಲಿನ 67 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯದ ಪಾಲು ₹24,960 ಕೋಟಿ, ಕೇಂದ್ರದ ಪಾಲು ₹22,758 ಕೋಟಿ ಇದೆ. ಕೇಂದ್ರ ₹18,561 ಕೋಟಿ ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ವಿಶೇಷ ಅನುದಾನ ₹5,495 ಕೋಟಿ, ಕೆರೆ ಅಭಿವೃದ್ಧಿ ಮತ್ತು ಫೆರಿಫೆರಲ್‌ ವರ್ತುಲ ರಸ್ತೆಗೆ ₹11,495 ಕೋಟಿ ಬರಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ನೀಡಿಲ್ಲ’ ಎಂದರು.

ರಾಜ್ಯ ಸರ್ಕಾರವೇ ಬಹುತೇಕ ನೆರವು ನೀಡುವ ಯೋಜನೆಗಳಿಗೂ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಹೆಸರಿದೆ. ಆದರೆ, ಸಣ್ಣ ಮೊತ್ತವೂ ಕೇಂದ್ರದಿಂದ ಬಂದಿಲ್ಲ. ಇಂತಹ ಅನ್ಯಾಯವನ್ನು ಎಲ್ಲ ಸಂಸದರು ಒಟ್ಟಾಗಿ ಪ್ರಶ್ನಿಸಬೇಕು. ಮೌನ ಮುರಿದು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು ಎಂದರು. 

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಎರಡು ವರ್ಷದ ಪಾಲು ₹10 ಸಾವಿರ ಬಾಕಿ ಕೋಟಿ ಬಾಕಿ ಇದೆ. ಕೇಂದ್ರ ಜಲಜೀವನ್‌ ಮಿಷನ್‌ನಲ್ಲಿ 23-24ನೇ ಸಾಲಿನ ₹7,656 ಕೋಟಿ, 24-25ನೇ ಸಾಲಿನ 3,233 ಕೋಟಿ  ಬರಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಬಾಕಿ ಉಳಿದಿದೆ ಎಂದು ವಿವರ ನೀಡಿದರು.

ಕೇಂದ್ರ ಸರ್ಕಾರ, ಕೇಂದ್ರದ ಸಚಿವರು, ಪ್ರಧಾನ ಮಂತ್ರಿಗೆ ನಿರಂತರವಾಗಿ ಪತ್ರ ಬರೆಯಲಾಗಿದೆ. ರಾಜ್ಯದಿಂದ ₹4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ಸಣ್ಣ ನೆರವೂ ರಾಜ್ಯಕ್ಕೆ ಸಿಗುತ್ತಿಲ್ಲ. ಮತ್ತೊಂದು ಕಡೆ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಕೇಂದ್ರ ಸಚಿವರು, ಬಿಜೆಪಿ ಸಂಸದರೇ ಆರೋಪ ಮಾಡುತ್ತಾರೆ ಎಂದು ದೂರಿದರು. 

ರಾಜ್ಯಸಭೆ ಸದಸ್ಯ ಲಹರ್‌ ಸಿಂಗ್ ಸಿರೋಯಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಉಪಸ್ಥಿತರಿದ್ದರು.

ಪಿಂಚಣಿ ಮೊತ್ತಕ್ಕೂ ಕತ್ತರಿ

ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿ ಗಳಿಗೆ ನೀಡುವ ಪಿಂಚಣಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸುತ್ತವೆ. 2024–25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₹5,665 ಕೋಟಿ, ಕೇಂದ್ರ ಸರ್ಕಾರ ₹559 ಕೋಟಿ ಮೊತ್ತ ನೀಡಬೇಕಿತ್ತು. ಆದರೆ, ಕೇಂದ್ರ ಇದುವರೆಗೂ ₹113.92 ಕೋಟಿಯಷ್ಟೇ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ನೀಡುವ ಸಣ್ಣ ಮೊತ್ತವನ್ನೂ ಕೊಡದ ಕೇಂದ್ರ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಬಡವರ ಬದುಕಿಗೆ ಭದ್ರತೆ ಒದಗಿಸುವ ಯೋಜನೆಯ ಹಣಕ್ಕೂ ಕತ್ತರಿ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೇ? ಕುಡಿಯುವ ನೀರಿಗೆ ಹಣ ಕೊಡಲಾಗದಷ್ಟು ಕೇಂದ್ರ ಸರ್ಕಾರ ದುರ್ಬಲವಾಗಿದೆಯೇ?
ರಿಜ್ವಾನ್‌ ಅರ್ಷದ್‌, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.