ADVERTISEMENT

2.10 ಲಕ್ಷ ಟನ್‌ ಉತ್ಪನ್ನ ಖರೀದಿಗೆ ಕೇಂದ್ರ ಸೂಚನೆ, ರಾಗಿ ಖರೀದಿ ನೋಂದಣಿ ಸ್ಥಗಿತ

ಆರ್.ಜಿತೇಂದ್ರ
Published 24 ಜನವರಿ 2022, 19:31 IST
Last Updated 24 ಜನವರಿ 2022, 19:31 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ರಾಮನಗರ: ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರಾಜ್ಯದಿಂದ ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸುವ ರಾಗಿಗೆ ಮಿತಿ ಹೇರಿದ್ದು, ಇದರಿಂದ ರಾಜ್ಯದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕೋವಿಡ್, ಅತಿವೃಷ್ಟಿ ನಡುವೆಯೂ ರಾಗಿ ಬೆಳೆದವರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಮೂಲಕ ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆಯ ಅಡಿ ಉತ್ಪನ್ನ ಖರೀದಿ ಮಾಡುತ್ತಿವೆ. ಈ ವರ್ಷ ಜನವರಿ 1ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ರಾಗಿ ಬೆಳೆದವರು ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿತ್ತು.

ಪ್ರತಿ ಕ್ವಿಂಟಲ್‌ಗೆ ₹3,377 ದರ ನಿಗದಿಪಡಿಸಿದ್ದು, ಒಂದು ಎಕರೆಗೆ 10 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್‌ ಖರೀದಿ ಮಾಡುವುದಾಗಿ ಘೋಷಿಸಿತ್ತು. ಆದರೆ ಸರ್ಕಾರ ನಿಗದಿಪಡಿಸಿದ ಗುರಿ ತಲುಪಿದ ಹಿನ್ನೆಲೆಯಲ್ಲಿ ಸದ್ಯ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈವರೆಗೆ ನೋಂದಣಿ ಮಾಡಿಸಿದವರಿಂದ ಮಾತ್ರವೇ ಖರೀದಿ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಕೇಂದ್ರದ ಮಿತಿ: ಈ ಹಿಂದಿನ ವರ್ಷಗಳಲ್ಲಿ ರಾಗಿ ಖರೀದಿಗೆ ಕೇಂದ್ರ ಸರ್ಕಾರ ಯಾವುದೇ ಮಿತಿ ವಿಧಿಸಿರಲಿಲ್ಲ. ಈ ವರ್ಷ ರಾಜ್ಯದಿಂದ 2.10 ಲಕ್ಷ ಟನ್‌ನಷ್ಟು ರಾಗಿಯನ್ನು (ಸುಮಾರು 21 ಲಕ್ಷಕ್ವಿಂಟಲ್‌) ಮಾತ್ರವೇ ಬೆಂಬಲ ಬೆಲೆ ನೀಡಿ ಕೊಳ್ಳುವುದಾಗಿ ಮಿತಿ ಹೇರಿದೆ. ರಾಜ್ಯದಲ್ಲಿ ಈ ವರ್ಷ ಅಂದಾಜು 3ರಿಂದ 4 ಲಕ್ಷ ಟನ್ ನಷ್ಟು ಉತ್ಪನ್ನದ ನಿರೀಕ್ಷೆ ಇದೆ.

ಕಳೆದ ಶುಕ್ರವಾರವೇ ಖರೀದಿ ಕೇಂದ್ರಗಳಲ್ಲಿ ನೋಂದಣಿ ಸ್ಥಗಿತಗೊಳಿಸಿದ್ದು, ರೈತರು ನಿರಾಸೆಯಿಂದ ವಾಪಸ್‌ ಆಗುತ್ತಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಈ ವರ್ಷ ಸದ್ಯಕ್ಕೆ 11,544 ರಾಗಿ ಬೆಳೆಗಾರರು ನೋಂದಾಯಿಸಿ ಕೊಂಡಿದ್ದು, ಇವರಿಂದ ಮಾತ್ರವೇ ಕೆಎಫ್‌ಸಿಎಸ್‌ಸಿ 1,81,591 ಕ್ಚಿಂಟಲ್ ರಾಗಿ ಖರೀದಿ ಮಾಡಲಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ನೋಂದಣಿಯಾದ 20,138 ರೈತರಿಂದ 4,03,316 ಕ್ವಿಂಟಲ್ ರಾಗಿಯನ್ನು ಖರೀದಿ ಮಾಡಲಾಗಿತ್ತು. ತುಮಕೂರಿನಲ್ಲಿ 7 ಲಕ್ಷ ಕ್ವಿಂಟಲ್‌ ಹಾಗೂ ಹಾಸನದಲ್ಲಿ 4 ಲಕ್ಷ ಕ್ವಿಂಟಲ್‌ನಷ್ಟು ಖರೀದಿ ನಡೆದಿತ್ತು.

ಬೆಲೆ ಕುಸಿತದ ಆತಂಕ:

ಒಂದು ವೇಳೆ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ರಾಗಿ ಖರೀದಿಯನ್ನು ಅರ್ಧಕ್ಕೆ ನಿಲ್ಲಿಸಿದರೆ ಮಿಕ್ಕೆಲ್ಲ ಉತ್ಪನ್ನ ಮುಕ್ತ ಮಾರುಕಟ್ಟೆ ಪ್ರವೇಶಿಸಲಿದ್ದು, ಇದರಿಂದ ಬೆಲೆ ಕುಸಿಯುವ ಆತಂಕ ಇದೆ. ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಪ್ರತಿ ಕ್ವಿಂಟಲ್‌ಗೆ ಸರಾಸರಿ ₹2800–3000 ಇದೆ. ಕಳೆದ ವರ್ಷ ಸರ್ಕಾರವೇ ₹3295 ಬೆಲೆ ನೀಡಿ ರೈತರಿಂದ ರಾಗಿ ಖರೀದಿ ಮಾಡಿತ್ತು. ರಾಮನಗರ ಜಿಲ್ಲೆಯಲ್ಲಿ ಈ ವರ್ಷ ಅತಿವೃಷ್ಟಿ ನಡುವೆಯೂ 7,28,300 ಕ್ವಿಂಟಲ್ ರಾಗಿ ಉತ್ಪನ್ನ ಸಿಗಲಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.