
ಬೆಂಗಳೂರು: ‘ಕೇಂದ್ರ ಸರ್ಕಾರದ ಎಲ್ಲ ಕಾನೂನುಗಳನ್ನು ನ. 1ರ ಒಳಗೆ ಕನ್ನಡಕ್ಕೆ ಸಂಪೂರ್ಣವಾಗಿ ಭಾಷಾಂತರಿಸಬೇಕು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಇಲಾಖೆ ಹಾಗೂ ಕರ್ನಾಟಕ ರಾಜಭಾಷಾ ಆಯೋಗ, ಭಾಷಾಂತರ ನಿರ್ದೇಶನಾಲಯ ಸಹಯೋಗದಲ್ಲಿ ವಿಕಾಸಸೌಧದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ದ್ವಿಭಾಷಾ ಆವೃತ್ತಿಗಳನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕೇಂದ್ರದ ಕಾನೂನುಗಳ ಪೈಕಿ ಶೇ 50ರಷ್ಟು ಮಾತ್ರ ಈವರೆಗೆ ಕನ್ನಡಕ್ಕೆ ಭಾಷಾಂತರ ಆಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಕಾನೂನು ರೂಪಿಸಿದ ನಂತರ ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಬದಲು, ಅವರಿಗೆ ಗೊತ್ತು ಎಂದು ತಿಳಿದುಕೊಂಡು ಆಡಳಿತ ನಡೆಸುವ ಪರಿಸ್ಥಿತಿ ಬಂದಿದೆ’ ಎಂದರು.
‘ಭಾಷಾಂತರ ವಿಭಾಗದಲ್ಲಿ ಮಾನವ ಸಂಪನ್ಮೂಲ ಅಥವಾ ಹಣಕಾಸಿನ ಕೊರತೆಯನ್ನು ನೀಗಿಸಲು ಸರ್ಕಾರ ಬದ್ಧವಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಭಾಷಾಂತರ ಪಂಡಿತರನ್ನು ಬಳಸಿಕೊಂಡು ಕೇಂದ್ರದ ಎಲ್ಲ ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸಬೇಕು’ ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
‘ಭಾರತೀಯ ದಂಡ ಸಂಹಿತೆಯಿಂದ ಬಿಎನ್‌ಎಸ್, ಬಿಎನ್‌ಎಸ್‌ಎಸ್‌ಗೆ ಬದಲಾವಣೆ ಮಾಡಿದಾಗ ರಾಜ್ಯದಿಂದ 21 ತಿದ್ದುಪಡಿಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಆ ತಿದ್ದುಪಡಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಲ್ಲ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಪಿತಾಮಹನನ್ನು ಅಪಮಾನ ಮಾಡುವುದನ್ನು ತಡೆಗಟ್ಟುವ ಅಂಶಗಳೂ ಆ ತಿದ್ದುಪಡಿಗಳಲ್ಲಿ ಇದ್ದವು’ ಎಂದು ಅವರು ತಿಳಿಸಿದರು.
ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿ ದೊರೆಸ್ವಾಮಿ, ಕೇಂದ್ರ ಕಾನೂನು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ವಿ. ಕುಮಾರ್, ಜಂಟಿ ಕಾರ್ಯದರ್ಶಿ ಬ್ರಜೇಶ್ ಕುಮಾರ್ ಸಿಂಗ್, ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್ ಇದ್ದರು.
‘ಆಡಳಿತ ಭಾಷೆ ಜನರ ಭಾಷೆ ಆಗಬೇಕು’
‘ಆಡಳಿತ ಭಾಷೆ ಜನಸಾಮಾನ್ಯರ ಭಾಷೆಯಾದರೆ ಮಾತ್ರ ಕಾನೂನು ಮತ್ತು ಯೋಜನೆಗಳ ಅನುಷ್ಠಾನ ಸಾಧ್ಯವಾಗಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
‘ಆಡಳಿತ ಭಾಷೆ ಜನರ ಭಾಷೆ ಆಗದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು ಮುಂದುವರಿಯಲಿದೆ. ಇದೇ ಕಾರಣಕ್ಕೆ ಕೇಂದ್ರದ ಜತೆಗೆ ದಕ್ಷಿಣ ಭಾರತದ ರಾಜ್ಯಗಳು ಭಿನ್ನಾಭಿಪ್ರಾಯ ಹೊಂದಿದ್ದು ಅದನ್ನು ಬಗೆಹರಿಸುವಲ್ಲಿ ಭಾಷಾಂತರ ವಿಭಾಗ ಪ್ರಮುಖ ಪಾತ್ರ ವಹಿಸಬೇಕು’ ಎಂದು ಸಲಹೆ ನೀಡಿದರು.
‘1992ರ ಜಾಗತೀಕರಣದ ಬಳಿಕ ಇಂಗ್ಲಿಷ್ ಸಂವಹನ ಆಡಳಿತ ಭಾಷೆಯಾಗಿ ಬೆಳೆಯಿತು. ಸಮೀಕ್ಷೆಯೊಂದರ ಪ್ರಕಾರ 1957ರ ನಂತರ 254 ಭಾಷೆಗಳು ನಾಶ ಆಗಿವೆ. ಕೆಲವೇ ವರ್ಷಗಳಲ್ಲಿ ಶೇ 92 ಜನರ ಭಾಷೆ ಮಾತನಾಡಲು ಮಾತ್ರ ಸೀಮಿತವಾಗಲಿದ್ದು ಶೇ 8ರಷ್ಟು ಜನರ ಭಾಷೆ ಪ್ರಾಬಲ್ಯ ಸಾಧಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.