ADVERTISEMENT

ರಸಗೊಬ್ಬರ ಉತ್ಪಾದನೆ; ಖಾಸಗಿ ಕಂಪನಿಗಳಿಗೆ ಆಹ್ವಾನ: ಭಗವಂತ ಖೂಬಾ

'ಕುಸಿದ ಕಚ್ಚಾವಸ್ತುಗಳ ಆಮದು, ಇಂಧನ ಸಾಮಗ್ರಿ ಕೊರತೆ'

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 8:26 IST
Last Updated 6 ನವೆಂಬರ್ 2021, 8:26 IST
ಭಗವಂತ ಖೂಬಾ
ಭಗವಂತ ಖೂಬಾ   

ಕಲಬುರಗಿ: ‘ಕಚ್ಚಾವಸ್ತುಗಳು ಹಾಗೂ ಇಂಧನ ಸಾಮಗ್ರಿ ಕೊರತೆಯ ಕಾರಣ ಕೇಂದ್ರ ಸರ್ಕಾರ ಹೊಸದಾಗಿ ರಸಗೊಬ್ಬರ ಉತ್ಪಾದನಾ ಘಟಕ ತೆರೆಯುತ್ತಿಲ್ಲ. ಬದಲಾಗಿ ಖಾಸಗಿಕಂಪನಿಗಳು ಮುಂದೆ ಬಂದರೆ ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸುತ್ತೇವೆ’ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

‘ಪ್ರಸಕ್ತ ವರ್ಷ ರಸಗೊಬ್ಬರಕ್ಕೆ ಬೇಕಾದ ಕಚ್ಚಾವಸ್ತುಗಳ ಆಮದು ಕುಗ್ಗಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲೂ ಇಂಧನ ಕೊರತೆಯಾಗಿದೆ. ಹಾಗಾಗಿ, ಸರ್ಕಾರದ ಮುಂದೆ ರಸಗೊಬ್ಬರ ಉತ್ಪಾದನೆ ಮಾಡುವ ಯಾವುದೇ ಯೋಜನೆ ಇಲ್ಲ. ಬದಲಾಗಿ ಗೊಬ್ಬರ ಉತ್ಪಾದನೆಗೆ ಕೆಲ ಖಾಸಗಿ ಕಂಪನಿಗಳು ಮುಂದೆ ಬಂದಿವೆ. ಅವರಿಗೆ ಬೇಕಾದ ಜಮೀನು, ವಿದ್ಯುತ್‌, ನೀರು, ರಿಯಾಯಿತಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆದು ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಅವರು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ತಿಳಿಸಿದರು.

‘ರಾಜ್ಯದಲ್ಲಿ ಹಿಂಗಾರು ಬಿತ್ತನೆಗೆ ರಸಗೊಬ್ಬರ ಕೊರತೆ ಉಂಟಾಗಿಲ್ಲ. ಈ ಬಗ್ಗೆ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವದಂತಿ ಹಬ್ಬಿಸಿ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುವ ಹುನ್ನಾರವಿದು. ರೈತರು ಆತಂಕ ಪ‍ಡಬೇಕಿಲ್ಲ. ಹಿಂಗಾರಿಗಿಂತಲೂ ಮುಂಚೆಯೇ ಆಯಾ ರಾಜ್ಯಗಳು ಸಲ್ಲಿಸಿದ ಬೇಡಿಕೆಯಷ್ಟು ಗೊಬ್ಬರವನ್ನು ಪೂರ್ಣಪ್ರಮಾಣದಲ್ಲಿ ಪೂರೈಸಿದ್ದೇವೆ. ಕರ್ನಾಟಕದಿಂದಲೂ ಈಗಾಗಲೇ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಎರಡನೇ ಬಾರಿಗೆ ಮಾತನಾಡಿದ್ದೇನೆ. ಕೊರತೆ ಇಲ್ಲ ಎಂಬುದನ್ನು ಅವರೂ ಖಚಿತಪಡಿಸಿದ್ದಾರೆ’ ಎಂದರು.

ADVERTISEMENT

‘ಕಲಬುರಗಿ ಹೊರವಲಯದಲ್ಲಿ 500 ಮೆಗಾ ವಾಟ್‌ ಸಾಮರ್ಥ್ಯ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಕೇಂದ್ರ ಮಂಜೂರಾತಿ ನೀಡಿದೆ. ಅದಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಪ‍ತ್ರವ್ಯವಹಾರಗಳು ಮುಗಿಯುವುದಷ್ಟೇ ಬಾಕಿ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ’ ಎಂಬ ಸಿದ್ದರಾಮಯ್ಯ ಅವರ ಮಾತು ಅವರ ಮನಸ್ಥಿತಿಯ ಪ್ರತಿಬಿಂಬ. ಸಮಾಜವಾದಿ ನೆಲೆಯಲ್ಲಿ ರಾಜಕೀಯ ಮಾಡಿದ ನೀವು; ಹೊಟ್ಟೆಪಾಡಿಗಾಗಿಯೇ ಕಾಂಗ್ರೆಸ್‌ ಸೇರಿದ್ದಿರೇನು?’ ಎಂದೂ ಖೂಬಾ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.