ADVERTISEMENT

ತ್ರಿವಳಿ ತಲಾಖ್‌: ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಲಿ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 16:47 IST
Last Updated 22 ಜೂನ್ 2019, 16:47 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಹುಬ್ಬಳ್ಳಿ: ‘ಲೋಕಸಭೆಯಲ್ಲಿ ಮಂಡನೆಯಾಗಿರುವ ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸುವ ಮಸೂದೆ ಕುರಿತು ಕಾಂಗ್ರೆಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದೆಡೆ ಮುಸ್ಲಿಂ ಮಹಿಳಾ ಸಬಲೀಕರಣದ ಕುರಿತು ಮಾತನಾಡುವ ಕಾಂಗ್ರೆಸ್‌ ಮುಖಂಡರು, ಇನ್ನೊಂದೆಡೆ ತ್ರಿವಳಿ ತಲಾಖ್‌ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ ಬೌದ್ಧಿಕವಾಗಿ ದಿವಾಳಿಯಾಗಿರುವುದರ ಸಂಕೇತ ಇದಾಗಿದೆ' ಎಂದು ಅವರು ಟೀಕಿಸಿದರು.

‘ಹಲಾಲ್‌, ತ್ರಿವಳಿ ತಲಾಖ್‌ ನಾಗರಿಕ ಸಮಾಜ ಒಪ್ಪುವ ಆಚರಣೆಗಳಲ್ಲ. ಇಸ್ಲಾಂನ ಧಾರ್ಮಿಕ ಆಚರಣೆಗಳಿಗೂ ಈ ಅನಿಷ್ಠ ಪದ್ಧತಿಗಳಿಗೂ ಯಾವುದೇ ಸಂಬಂಧವಿಲ್ಲ. ತ್ರಿವಳಿ ತಲಾಖ್‌ ನಿಷೇಧಕ್ಕೆ ಮುಸ್ಲಿಂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಗೊಂಡಾರಣ್ಯದಲ್ಲಿ ಹಾದಿ ತಪ್ಪಿಸಿಕೊಂಡವರಂತೆ ಕಾಂಗ್ರೆಸ್‌ ಪರಿಸ್ಥಿತಿಯಾಗಿದೆ. ಹೀಗಾಗಿ ತ್ರಿವಳಿ ತಲಾಖ್‌ ವಿಷಯದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದೆ’ ಎಂದು ಆಪಾದಿಸಿದರು.

ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯಲು ಅಗತ್ಯವಿರುವಷ್ಟು ಸಂಖ್ಯಾಬಲ ಕಾಂಗ್ರೆಸ್‌ ಹೊಂದಿಲ್ಲ. ಹೀಗಾಗಿ ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರ ನಡೆದುಕೊಳ್ಳಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.