ADVERTISEMENT

ಜವರೇಗೌಡರ ಪುಸ್ತಕ ಏಕೆ ವಿರೋಧಿಸಲಿಲ್ಲ: ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 20:29 IST
Last Updated 18 ಮಾರ್ಚ್ 2023, 20:29 IST
ಶೋಭಾ ಕರಂದ್ಲಾಜೆ ಹಾಗೂ ಎಚ್‌.ಡಿ. ಕುಮಾರಸ್ವಾಮಿ
ಶೋಭಾ ಕರಂದ್ಲಾಜೆ ಹಾಗೂ ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಸಾಹಿತಿ ಡಾ.ದೇ. ಜವರೇಗೌಡರ ನೇತೃತ್ವದಲ್ಲಿ 2006ರಲ್ಲಿ ಪ್ರಕಟಿಸಿದ್ದ ‘ಸುವರ್ಣ ಮಂಡ್ಯ’ ಕೃತಿಯಲ್ಲಿ ಉರಿಗೌಡ ಮತ್ತು ನಂಜೇಗೌಡರ ಉಲ್ಲೇಖವಿದೆ. ಅವು ಕಾಲ್ಪನಿಕ ವ್ಯಕ್ತಿತ್ವ ಗಳಾಗಿದ್ದರೆ ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಏಕೆ ಕೃತಿಯನ್ನು ವಿರೋಧಿಸಲಿಲ್ಲ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉರಿಗೌಡರು ಮತ್ತು ನಂಜೇಗೌಡರು ರಾಜ್ಯದ, ಮಂಡ್ಯದ, ಮೈಸೂರಿನ ಸ್ವಾಭಿಮಾನ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ಇಬ್ಬರನ್ನೂ ಅವಮಾನಿಸುತ್ತಿವೆ’ ಎಂದರು.

2006ರಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ‘ಸುವರ್ಣ ಮಂಡ್ಯ’ ಕೃತಿಯನ್ನು ಬಿಡುಗಡೆ ಮಾಡಿದ್ದರು. ಆಗ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎನ್‌. ಚಲುವರಾಯಸ್ವಾಮಿ ಅವರೇ ಕೃತಿಗೆ ಮುನ್ನುಡಿ ಬರೆದಿದ್ದರು. ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಆಗ ಏಕೆ ವಿರೋಧ ಮಾಡಲಿಲ್ಲ ಎಂದು ಅವರು ಹೇಳಿದರು.

ADVERTISEMENT

ಸಿದ್ದರಾಮಯ್ಯ ಅವರೂ ಮೈಸೂರು ಮತ್ತು ಮಂಡ್ಯದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ‘ಸುವರ್ಣ ಮಂಡ್ಯ’ ಕೃತಿಯನ್ನು ಖರೀದಿಸಿ ಜನರಿಗೆ ವಿತರಿಸಬೇಕಾಗುತ್ತದೆ.

ಮತಕ್ಕಾಗಿ ಅಲ್ಲ, ಪುಸ್ತಕ ಓದಿ ಉರಿಗೌಡ ಮತ್ತು ನಂಜೇಗೌಡರ ಹೋರಾಟದ ಬಗ್ಗೆ ಅರಿಯಿರಿ ಎಂದು ಜನರಿಗೆ ಮನವಿ ಮಾಡಬೇಕಾಗುತ್ತದೆ ಎಂದರು.

‘ಉರಿಗೌಡ, ನಂಜೇಗೌಡರನ್ನು ಬಿಜೆಪಿ ದಹಿಸುತ್ತಿದೆ’
ಬೆಂಗಳೂರು: ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡ ಹೆಸರುಗಳನ್ನು ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಜೀವಂತ ಇರುವ ಉರಿಗೌಡ, ನಂಜೇಗೌಡರನ್ನು ಕೋಮು ದಳ್ಳುರಿಯಲ್ಲಿ ದಹಿಸುತ್ತಿದೆ ಎಂದು ಜೆಡಿಎಸ್ ಶಾಸಕಾಂಕ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಉರಿಗೌಡ, ನಂಜೇಗೌಡ ಇದ್ದರೋ? ಇಲ್ಲವೋ? ಗೊತ್ತಿಲ್ಲ. ಜೀವಂತ ಇರುವ ವ್ಯಕ್ತಿಗಳ ಬಗ್ಗೆ ಯೋಚಿಸಬೇಕು’ ಎಂದರು.

ಈ ಇಬ್ಬರ ಹೆಸರೂ ಕೇವಲ ಕಾಲ್ಪನಿಕ. ಆ ಹೆಸರುಗಳನ್ನು ಬಳಸಿಕೊಂಡು ಸಿನಿಮಾ ನಿರ್ಮಿಸಿ, ಹಣ ಮಾಡಬಹುದು. ಬೇರೇನೂ ಮಾಡಲು ಸಾಧ್ಯವಿಲ್ಲ. ಬಿಜೆಪಿ ನೈತಿಕತೆಯನ್ನು ಬಿಟ್ಟು ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜ ಒಡೆಯುತ್ತಿದೆ. ಒಂದು ಸಮಾಜ ಇನ್ನೊಂದು ಸಮಾಜವನ್ನು ಅನುಮಾನದಿಂದ ನೋಡುವಂತಹ ವಾತಾವರಣ ಸೃಷ್ಟಿಸುತ್ತಿದೆ ಎಂದು ಅವರು ದೂರಿದರು.

‘ಸುವರ್ಣ ಮಂಡ್ಯ’ದಲ್ಲಿ ಉರಿಗೌಡ, ದೊಡ್ಡನಂಜೇಗೌಡ
ಮಂಡ್ಯ: ಸಂಶೋಧಕ ಹ.ಕ.ರಾಜೇಗೌಡರು ಬರೆದಿರುವ ಲೇಖನವೊಂದರಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರು ಪ್ರಸ್ತಾಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಡ್ಯ ಜಿಲ್ಲೆ ರಚನೆಯಾಗಿ 50 ವರ್ಷ ಪೂರ್ಣಗೊಂಡಾಗ, ಡಾ.ದೇ.ಜವರೇಗೌಡರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ ‘ಸುವರ್ಣ ಮಂಡ್ಯ’ ಸ್ಮರಣ ಸಂಚಿಕೆಯಲ್ಲಿ ಹ.ಕ.ರಾಜೇಗೌಡರ ‘ಮಂಡ್ಯ ಐವತ್ತು; ಒಂದು ಪಕ್ಷಿ ನೋಟ’ ಲೇಖನವಿದೆ.

‘ದೊಡ್ಡನಂಜೇಗೌಡ, ಉರಿಗೌಡ ಮುಂತಾದವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತವರು. ಅದಕ್ಕೆ ಟಿಪ್ಪುವಿನ ಧಾರ್ಮಿಕ ಹಾಗೂ ಭಾಷಾ ನೀತಿಯೂ ಕಾರಣವಿರಬೇಕು. ಟಿಪ್ಪು ಅಡಳಿತದ ಎಲ್ಲಾ ಅಂಗಗಳಲ್ಲಿಯೂ ಬರಿಯ ಮುಸಲ್ಮಾನರನ್ನೇ ನೇಮಿಸಿದ್ದು, ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸಿದ್ದು, ಈ ನೆಲದ ಜನರಲ್ಲಿ ಅಭದ್ರತೆ, ಅನುಮಾನಗಳನ್ನು ಬಿತ್ತಿದಂತೆ ಕಾಣುತ್ತದೆ. ‌

ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಅನೇಕ ಗೌಡರು ಟಿಪ್ಪು ವಿರುದ್ಧ ತಿರುಗಿಬಿದ್ದ ಮತ್ತು ಇಂಗ್ಲಿಷರಿಗೆ ಬೆಂಬಲ ಸೂಚಿಸಿದ ಉದಾಹರಣೆಗಳಿವೆ’ ಎಂದು ರಾಜೇಗೌಡರು ಬರೆದಿದ್ದಾರೆ. ಇಡೀ ಲೇಖನದಲ್ಲಿ, ‘ಉರಿಗೌಡ, ದೊಡ್ಡ ನಂಜೇಗೌಡರೇ ಟಿಪ್ಪುವನ್ನು ಕೊಂದರು’ ಎಂದು ಎಲ್ಲೂ ಪ್ರಸ್ತಾಪವಿಲ್ಲ. ಆದರೆ, ‘ಇಬ್ಬರೂ ಟಿಪ್ಪು ಕೊಂದಿರುವುದಕ್ಕೆ ಇದೇ ಸಾಕ್ಷಿ’ ಎಂಬಂತೆ ಲೇಖನ ಬಿಂಬಿತವಾಗುತ್ತಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಲಾವಣಿ ತೋರಿಸಿ, ಚರ್ಚೆಗೆ ಬನ್ನಿ’
ಮಂಡ್ಯ: ‘ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಟಿಪ್ಪು ಕೊಂದರೆಂಬುದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇಲ್ಲ. ಲಾವಣಿ ಸಿಕ್ಕಿದ್ದರೆ ಸಾರ್ವಜನಿಕರಿಗೆ ತೋರಿಸಬೇಕು, ಬಹಿರಂಗ ಚರ್ಚೆಗೆ ಬರಬೇಕು’ ಎಂದು ಲೇಖಕ ಡಾ.ಜಗದೀಶ್‌ ಕೊಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಸಂಶೋಧಕ ಹ.ಕ.ರಾಜೇಗೌಡರು ಸಂಗ್ರಹಿಸಿದ ಲಾವಣಿಯಲ್ಲಿ ಉರಿಗೌಡ, ದೊಡ್ಡ ನಂಜೇಗೌಡರು ಟಿಪ್ಪು ಕೊಂದಿದ್ದಾರೆಂಬ ಮಾಹಿತಿ ಇದೆ ಎನ್ನುವುದೇ ಸುಳ್ಳು. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುವುದು ಬಿಟ್ಟು ಕತೆ ಕಟ್ಟಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಟಿಪ್ಪು ಸುಲ್ತಾನ್‌ ಬ್ರಾಹ್ಮಣರ, ಶ್ರೀಮಂತರ ಜಮೀನು ಕಿತ್ತು ಬಡವರಿಗೆ ಹಾಗೂ ಶರಣಾಗತರಾದ ಸೈನಿಕರಿಗೆ ಕೊಟ್ಟಿದ್ದ ಸೇಡಿಗಾಗಿ ಸುಳ್ಳಿನ ಕತೆ ಸೃಷ್ಟಿಸುತ್ತಿದ್ದಾರೆ. ಟಿಪ್ಪು ಸತ್ತ ಇತಿಹಾಸವನ್ನು ಬ್ರಿಟಿಷರು ಪರಿಪೂರ್ಣವಾಗಿ ದಾಖಲಿಸಿದ್ದಾರೆ’ ಎಂದರು.

‘ಟಿಪ್ಪುವನ್ನು ಕೊಂದ ಕಿರೀಟ ಮಂಡ್ಯ ಒಕ್ಕಲಿಗರಿಗೆ ಬೇಕಿಲ್ಲ, ಕೊಂದು ಆಳುವ ಸಂಸ್ಕೃತಿ ಮಂಡ್ಯದ್ದಲ್ಲ. ಸುಳ್ಳುಗಳನ್ನು ಸಂಭ್ರಮಿಸುವುದೇ ಬಿಜೆಪಿ ಸಂಸ್ಕೃತಿ. ಅದೇ ಕಾರಣಕ್ಕೆ ಸಚಿವ ಮುನಿರತ್ನ ಸುಳ್ಳಿನ ಸಿನಿಮಾ ಮಾಡಲು ಹೆಸರು ನೋಂದಾಯಿಸಿದ್ದಾರೆ’ ಎಂದು ಆರೋಪಿಸಿದರು.

ನಿವೃತ್ತ ಪ್ರಾಚಾರ್ಯ ಎಂ.ವಿ.ಕೃಷ್ಣ ಮಾತನಾಡಿ, ‘ಯುದ್ಧದಲ್ಲಿ ಸಹಾಯ ಮಾಡಿದವರಿಗೆ ಬ್ರಿಟಿಷರು ಹಳ್ಳಿ, ಭೂಮಿ ಇನಾಂ ಕೊಟ್ಟಿದ್ದರು. ಉರಿಗೌಡ, ನಂಜೇಗೌಡರು ಟಿಪ್ಪು ಕೊಂದಿದ್ದರೆ ಅವರಿಗೆ ನೀಡಿದ್ದ ಹಳ್ಳಿ ಯಾವುದು, ಭೂಮಿ ಎಲ್ಲಿದೆ’ ಎಂದು ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್‌ ಕೆರಗೋಡು, ‘ಟಿಪ್ಪು ನಿಧನ, ಆತನ ಕೊಡುಗೆ ಕುರಿತಾಗಿ ಮಾರ್ಚ್‌ 26ರಂದು ನಗರದಲ್ಲಿ ವಿಚಾರ ಸಂಕಿರಣ, ಸಂವಾದ ಆಯೋಜಿಸಲಾಗಿದೆ’ ಎಂದರು. ಕೆ.ಬೋರಯ್ಯ, ಉಗ್ರನರಸಿಂಹೇಗೌಡ, ಕೆಂಪೂಗೌಡ, ಅಭಿರುಚಿ ಗಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.