
ಸಂಸದ ಜಗದೀಶ ಶೆಟ್ಟರ್
ಬೆಳಗಾವಿ: 'ರಾಜ್ಯ ಸರ್ಕಾರದಿಂದ ಪಾವತಿಸಬೇಕಿರುವ ಅನುದಾನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ತೊಡಕಾಗಿದೆ. ಬೆಳಗಾವಿ-ಚನ್ನಮ್ಮನ ಕಿತ್ತೂರು-ಧಾರವಾಡ ನಡುವಿನ ನೇರ ರೈಲ್ವೆ ಮಾರ್ಗದ ಯೋಜನಾ ವೆಚ್ಚ ಹೆಚ್ಚಾಗಬಹುದು' ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬೆಳಗಾವಿ-ಚನ್ನಮ್ಮನ ಕಿತ್ತೂರು-ಧಾರವಾಡ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ 2019ರಲ್ಲೇ ಕೇಂದ್ರವು ₹927 ಕೋಟಿ ಅನುದಾನ ಮಂಜೂರುಗೊಳಿಸಿದೆ. ಆದರೆ, ಯೋಜನೆಗೆ ಬೆಳಗಾವಿ ಜಿಲ್ಲೆಯಲ್ಲಿ ಸ್ವಾಧೀನ ಪಡಿಸಿಕೊಂಡ 406 ಎಕರೆ ಭೂಮಿ, ಧಾರವಾಡ ಜಿಲ್ಲೆಯಲ್ಲಿ ಸ್ವಾಧೀನ ಪಡಿಸಿಕೊಂಡ 382 ಎಕರೆ ಭೂಮಿಗೆ ₹243 ಕೋಟಿ ಪರಿಹಾರ ಕೋರಿ ಪ್ರಸ್ತಾವ ಸಲ್ಲಿಸಿದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಏಳು ವರ್ಷಗಳಿಂದ ಯೋಜನೆಯು ಅನುಷ್ಠಾನ ಹಂತದಲ್ಲೇ ಉಳಿದಿದೆ' ಎಂದು ದೂರಿದರು.
'ಸ್ಮಾರ್ಟ್ ಸಿಟಿ ಮಿಷನ್ 2 ಅಡಿ ಕೇಂದ್ರವು ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ₹135 ಕೋಟಿ ಬಿಡುಗಡೆ ಮಾಡಿದೆ. ಆದರೆ, ಕೆಲಸಗಳು ಇನ್ನೂ ಆರಂಭವಾಗಿಲ್ಲ' ಎಂದು ದೂರಿದರು.
ಬೆಳಗಾವಿ ತಾಲ್ಲೂಕಿನ ಹಲಗಾದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು 19 ಎಕರೆ, 9 ಗುಂಟೆ ಭೂಮಿ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಮಾಡಲಾಗಿದೆ. ಯೋಜನೆಗೆ ಭೂಮಿ ನೀಡಿದವರಿಗೆ ಹೆಚ್ಚುವರಿಯಾಗಿ ₹21.40 ಕೋಟಿ ಪರಿಹಾರ ನೀಡುವುದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಕೊಟ್ಟಿದೆ. ಆದರೆ, ಈವರೆಗೆ ರಾಜ್ಯ ಸರ್ಕಾರ ಪರಿಹಾರ ಕೊಡದ್ದರಿಂದ ಯೋಜನೆ ತೆವಳುತ್ತ ಸಾಗಿದೆ' ಎಂದು ಆರೋಪಿಸಿದರು.
'ಅಮೃತ-2 ಯೋಜನೆಯಡಿ ಕೇಂದ್ರವು ಕೆರೆಗಳ ಪುನರುಜ್ಜೀವನಕ್ಕಾಗಿ ₹29 ಕೋಟಿ ಮತ್ತು ಉದ್ಯಾನಗಳ ಅಭಿವೃದ್ಧಿಗೆ ₹39.45 ಕೋಟಿ ಬಿಡುಗಡೆ ಮಾಡಿದೆ. ಆದರೆ, ಹಣ ಬಳಸಲಾಗಿಲ್ಲ. ಅದನ್ನು ಬಳಸದಿದ್ದರೆ ಕೇಂದ್ರ ಹಣ ಹಿಂಪಡೆಯಬಹುದು' ಎಂದು ಹೇಳಿದರು.
'ಕೇಂದ್ರದ ವಿವಿಧ ಯೋಜನೆಗಳಡಿ ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ₹215 ಕೋಟಿ ಬಿಡುಗಡೆ ಆಗಿದೆ. ಆದರೆ, ಈವರೆಗೆೆ ಕಾಮಗಾರಿ ಅನುಷ್ಠಾನಕ್ಕೆ ಬಂದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.