ADVERTISEMENT

ಕೈಗಾ ಹೊಸ ಘಟಕ: ಕೇಂದ್ರ ವನ್ಯಜೀವಿ ಮಂಡಳಿಯಿಂದಲೂ ಹಸಿರು ನಿಶಾನೆ

ಸಂತ್ರಸ್ತರ ಪುನರ್ವಸತಿಗೆ ಹಣ ನೀಡಲು ತಾಕೀತು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 18:57 IST
Last Updated 26 ಸೆಪ್ಟೆಂಬರ್ 2019, 18:57 IST
   

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಗೆ ಭಾರತೀಯ ಅಣು ಶಕ್ತಿ ನಿಗಮಕ್ಕೆ (ಎನ್‌ಪಿಸಿಎಲ್‌) ರಾಷ್ಟ್ರೀಯ ವನ್ಯಜೀವಿ ಮಂಡಳಿ ಕೂಡಷರತ್ತುಬದ್ಧ ಅನುಮತಿ ನೀಡಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸ್ಥಾಪನೆಯಾದಾಗ ನಿರ್ಗತಿಕರಾದವರ ಪುನರ್ವಸತಿಗೆ ಹಣ ನೀಡಬೇಕು ಎಂಬತಾಕೀತು ಮಾಡಲಾಗಿದೆ.

ಇದರೊಂದಿಗೆಸ್ಥಾವರದ ವಿಸ್ತರಣೆಗೆ ಇದ್ದ ಬಹುತೇಕ ಎಲ್ಲ ಅಡೆತಡೆಗಳೂ ನಿವಾರಣೆಆದಂತಾಗಿದೆ. ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಈಗಾಗಲೇ ಷರತ್ತುಬದ್ಧ ಅನುಮತಿದೊರೆತಿದೆ. ಅದರಲ್ಲಿ, ಯಾವುದೇ ಕಾಮಗಾರಿ ಆರಂಭಿಸುವ ಮೊದಲು ಕೇಂದ್ರ ವನ್ಯಜೀವಿ ಮಂಡಳಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವಂತೆ ತಿಳಿಸಲಾಗಿತ್ತು.

ಈ ಸಂಬಂಧ ವನ್ಯಜೀವಿ ಮಂಡಳಿಗೆ ಎನ್‌ಪಿಸಿಎಲ್ ಅರ್ಜಿ ಸಲ್ಲಿಸಿತ್ತು. ಈಚೆಗೆ ದೆಹಲಿಯಲ್ಲಿ ನಡೆದ ಮಂಡಳಿಯ 55ನೇ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡಲಾಗಿದೆ.

ADVERTISEMENT

ಷರತ್ತುಗಳೇನು?:ವನ್ಯಜೀವಿಗಳ ಸಂರಕ್ಷಣೆಗೆ ರಾಜ್ಯ ಅರಣ್ಯ ಇಲಾಖೆಯು ನಿರ್ಧರಿಸಿದಂತೆ ಎನ್‌ಪಿಸಿಎಲ್‌ನಿಂದ ವಾರ್ಷಿಕ ಸೆಸ್ ವಸೂಲಿ ಮಾಡಬೇಕು. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಜನರ ಪುನರ್ವಸತಿ ಪ್ರಕ್ರಿಯೆಗೆ ಅನುದಾನದ ಕೊರತೆಯಾಗಿದೆ. ಹಾಗಾಗಿ, ಅದು ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಎನ್‌ಪಿಸಿಎಲ್‌ನೀಡುವ ಹಣವನ್ನು ಅದಕ್ಕೆ ಬಳಸಬೇಕು ಎಂಬ ಷರತ್ತಿನಿಂದಾಗಿ ಪುನರ್ವಸತಿ ಕಾರ್ಯ ಪುನಃ ಆರಂಭವಾಗುವ ಸಾಧ್ಯತೆಯಿದೆ.

ಹೊಸ ಘಟಕಗಳ ಸ್ಥಾಪನೆಗೆ ಅಗತ್ಯವಿರುವ ಸಾಮಗ್ರಿಯನ್ನು ಸಮೀಪದ ಕಾಡಿನಿಂದ ಪಡೆದುಕೊಳ್ಳಬಾರದು. ಅರಣ್ಯ ಪ್ರದೇಶದಿಂದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಮಿಕರ ವಾಸ್ತವ್ಯ ಇರಬಾರದು. ಕಾರ್ಮಿಕರುಅರಣ್ಯದ ಯಾವುದೇ ಉತ್ಪನ್ನಗಳನ್ನೂ ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದೂ ಷರತ್ತು ವಿಧಿಸಲಾಗಿದೆ.

ಕೈಗಾದ ಹೊಸ ಘಟಕಗಳ ಸ್ಥಾಪ‍ನೆಗಾಗಿಮತ್ತಷ್ಟು ಜನವಸತಿ ಪ್ರದೇಶ, ಇತರ ನಿರ್ಮಾಣಗಳು ಮತ್ತು ರಸ್ತೆ ಕಾಮಗಾರಿಗಳ ಅಗತ್ಯವಿದೆ. ಆದರೆ, ಇವುಗಳಿಗೆಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಬಾರದು ಎಂದು ತಾಕೀತು ಮಾಡಲಾಗಿದೆ.

ಈ ಎಲ್ಲ ಷರತ್ತುಗಳ ಪಾಲನೆಯ ಬಗ್ಗೆ ಖಚಿತಪಡಿಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿಯ ಮುಖ್ಯಸ್ಥರು ಸಮಿತಿ ರಚಿಸಬೇಕು. ಅದರಲ್ಲಿ ಭಾರತೀಯ ಅಣುಶಕ್ತಿ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಅರಣ್ಯ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರದ ಸ್ಥಾನಿಕ ಕಚೇರಿಯ ಅಧಿಕಾರಿಗಳು ಸದಸ್ಯರಾಗಿರಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.