ADVERTISEMENT

ಗೌರವಧನ ವಿಳಂಬ: ಕೇಂದ್ರ ಸರ್ಕಾರಕ್ಕೆ ₹ 1 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 22:00 IST
Last Updated 20 ಫೆಬ್ರುವರಿ 2023, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ತಮ್ಮ ಗೌರವಧನ ಪಡೆಯಲು ಸತತ ಮೂರು ಬಾರಿ ಹೈಕೋರ್ಟ್ ಮೆಟ್ಟಿಲೇರಲು ಕಾರಣವಾದ ಕೇಂದ್ರ ಗೃಹ ಸಚಿವಾಲಯ ಮತ್ತು ಬ್ಯಾಂಕ್‌ಗೆ ಹೈಕೋರ್ಟ್ ₹ 1 ಲಕ್ಷ ವ್ಯಾಜ್ಯ ವೆಚ್ಚದ ರೂಪದಲ್ಲಿ ದಂಡ ವಿಧಿಸಿದೆ.

‘ಜೀವಿತ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ 2018ರಿಂದ ನನ್ನ ಗೌರವಧನ ತಡೆ ಹಿಡಿಯಲಾಗಿದೆ’ ಎಂದು ಆಕ್ಷೇಪಿಸಿ ಬ್ಯಾಂಕ್‌ ಅನ್ನು ಪ್ರತಿವಾದಿಯನ್ನಾಗಿಸಿ ಮಲ್ಲೇಶ್ವರದ ನಿವಾಸಿ ಎಚ್.ನಾಗಭೂಷಣ್ ರಾವ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ‘2018ರಿಂದ ಬಾಕಿ ಇರುವ ಸುಮಾರು ₹ 3.71 ಲಕ್ಷ ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿಯೊಂದಿಗೆ ಮುಂದಿನ ಎರಡು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ. ವಿಳಂಬ ಮಾಡಿದರೆ ಶೇ 18ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು‘ ಎಂದು ನಿರ್ದೇಶಿಸಿದೆ.

ADVERTISEMENT

‘ವಯಸ್ಸಾಗಿದೆ ಎಂಬ ಕಾರಣದಿಂದ ಜೀವನ ಪ್ರಮಾಣ ಪತ್ರ ಸಲ್ಲಿಸಲಾಗಿಲ್ಲ ಎಂದು ಗೌರವಧನವನ್ನು ತಡೆಹಿಡಿಯಲು ಸಾಧ್ಯವಿಲ್ಲ. ಇದರಿಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಹಕ್ಕನ್ನು ಕಸಿದುಕೊಂಡಂತೆ ಆಗಬಾರದು’ ಎಂದು ಹೇಳಿರುವ ನ್ಯಾಯಪೀಠ,
‘70 ರಿಂದ 99 ವರ್ಷದೊಳಗಿನ ಸ್ವಾತಂತ್ರ್ಯ ಹೋರಾಟಗಾರರ ಜೀವಿತ ಪ್ರಮಾಣ ಪತ್ರವನ್ನು ಪಡೆಯಲು
ಬ್ಯಾಂಕ್ ಸಿಬ್ಬಂದಿಯೇ ಅರ್ಜಿದಾರರ ಮನೆಗೆ ಹೋಗಬೇಕು ಮತ್ತು ಸ್ಥಳದಲ್ಲಿಯೇ ಆನ್‌ಲೈನ್‌ನಲ್ಲಿ ನವೀಕರಿಸಿಕೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.