ADVERTISEMENT

ಎಚ್‌ಎಂಟಿ ಭೂವಿವಾದ: ಗೋಕುಲ್‌ ಅಮಾನತು ಒಪ್ಪದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:44 IST
Last Updated 18 ಜುಲೈ 2025, 15:44 IST
   

ನವದೆಹಲಿ: ಎಚ್‌ಎಂಟಿ ಕಂಪನಿಗೆ ನೀಡಿದ ₹ 14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್‌ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್‌) ಆರ್. ಗೋಕುಲ್ ಅವರನ್ನು ಅಮಾನತು ಮಾಡಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಒಪ್ಪಿಲ್ಲ. ಇದರಿಂದಾಗಿ, ಎಚ್‌ಎಂಟಿ ಭೂವಿವಾದದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಮಜಲು ತಲುಪಿದೆ. 

ಐಎಫ್‌ಎಸ್‌ ದರ್ಜೆಯ ಅಧಿಕಾರಿಯನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಹೆಚ್ಚಿನ ಅವಧಿಗೆ ಅಮಾನತು ಮಾಡಲು ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯ ಇದೆ. ಗೋಕುಲ್‌ ಅಮಾನತು ದೃಢೀಕರಿಸಲು/ ವಿಸ್ತರಿಸಲು ರಾಜ್ಯವು ಸಚಿವಾಲಯಕ್ಕೆ ಜುಲೈ 3ರಂದು ಪ್ರಸ್ತಾವ ಸಲ್ಲಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಇದೇ 11ರಂದು ಪತ್ರ ಬರೆದಿರುವ ಸಚಿವಾಲಯವು, ‘ರಾಜ್ಯ ಸರ್ಕಾರ ವಿಳಂಬವಾಗಿ ಪ್ರಸ್ತಾವ ಸಲ್ಲಿಸಿದೆ. ಜತೆಗೆ, ಪ್ರಕರಣದ ವಿಸ್ತೃತ ವರದಿ ಸಲ್ಲಿಸಿಲ್ಲ. ಹೀಗಾಗಿ, ಈ ಹಂತದಲ್ಲಿ ಅಮಾನತು ಆದೇಶ ದೃಢೀಕರಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಈ ನಡುವೆ, ಅಮಾನತು ಆದೇಶ ಪ್ರಶ್ನಿಸಿ ಗೋಕುಲ್‌ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಮೊರೆ ಹೋಗಿದ್ದು, ಇದೇ 22ರಂದು ವಿಚಾರಣೆಗೆ ಬರಲಿದೆ. ಎಚ್‌ಎಂಟಿ ಭೂವಿವಾದದ ವಿಚಾರಣೆ ಇದೇ 29ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. 

‘ಯಾವುದೇ ಪ್ರಕರಣದಲ್ಲಿ ಅಮಾನತಿಗೆ ಕಾರಣವಾದ ಅಂಶಗಳ ಬಗ್ಗೆ ಕೇಂದ್ರದ ಕೇಡರ್‌ ನಿಯಂತ್ರಣ ಪ್ರಾಧಿಕಾರಕ್ಕೆ 48 ಗಂಟೆಗಳಲ್ಲಿ ಮಾಹಿತಿ ನೀಡಬೇಕು. 30 ದಿನಗಳಲ್ಲಿ ಅಮಾನತಿಗೆ ದೃಢೀಕರಣ ಆಗಬೇಕು. ಆದರೆ, ಈ ಪ್ರಕರಣದಲ್ಲಿ ಈ ನಿಯಮ ಪಾಲನೆ ಆಗಿಲ್ಲ. ಜತೆಗೆ, ಅಮಾನತು ಆದ 15 ದಿನಗಳಲ್ಲಿ ವಿಸ್ತೃತ ವರದಿಯನ್ನೂ ಸಲ್ಲಿಸಿಲ್ಲ’ ಎಂದು ಸಚಿವಾಲಯವು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.