ADVERTISEMENT

CET: ನೀಟ್‌ ಫಲಿತಾಂಶದ ಬಳಿಕ ಎಂಜಿನಿಯರಿಂಗ್‌ ಸೀಟು ಹಂಚಿಕೆ– ಎಚ್. ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 9:06 IST
Last Updated 2 ಜೂನ್ 2024, 9:06 IST
<div class="paragraphs"><p>Students</p></div>

Students

   

ಬೆಂಗಳೂರು: ‘ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶ ಬಂದ ನಂತರ ಎಂಜಿನಿಯರ್‌ ಸೀಟು ಹಂಚಿಕೆ ಮಾಡಲಾಗುವುದು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.

‘ನೀಟ್ ಫಲಿತಾಂಶಕ್ಕೂ ಮೊದಲೇ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ, ಮೊದಲು ವೈದ್ಯಕೀಯ ಕೋರ್ಸ್ ಸೀಟ್ ಹಂಚಿಕೆ ಮಾಡಿ ನಂತರ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು’ ಎಂದರು.

ADVERTISEMENT

ಬೇರೆ ಬೇರೆ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಿಇಟಿಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತದೆ. ಸೀಟ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಡೋನೇಷನ್ ಕೊಟ್ಟು ಪ್ರವೇಶ ಮಾಡಿಸಬೇಡಿ. ಒಳ್ಳೆಯ ರ‍್ಯಾಂಕ್‌ ಪಡೆದವರಿಗೆ ಒಳ್ಳೆಯ ಕಾಲೇಜು ಸಿಗಲಿದೆ’ ಎಂದು ಅವರು ಪೋಷಕರಿಗೆ ಭರವಸೆ ನೀಡಿದರು.

‘ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಲಭ್ಯವಿದೆ. ರ‍್ಯಾಂಕ್‌ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಕಾಲೇಜುಗಳಲ್ಲಿನ ಕೋರ್ಸ್ ಶುಲ್ಕವನ್ನು ಇನ್ನೂ ನಿಗದಿ ಮಾಡಿಲ್ಲ’ ಎಂದರು.

‘ಎಲ್ಲ ಪ್ರಕ್ರಿಯೆಗಳು ಆನ್ ಲೈನ್‌ನಲ್ಲಿ ನಡೆಯಲಿದೆ. ಶೇ 100 ರಷ್ಟು ದಾಖಲೆಗಳ ಪರಿಶೀಲನೆ ಆನ್‌ಲೈನ್‌ನಲ್ಲಿಯೇ ಮಾಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕೆಇಎ ಮುಂದೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಸಿಇಟಿ ಫಲಿತಾಂಶವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಶನಿವಾರವೇ (ಜೂ.1) ಕೆಇಎ ಪ್ರಕಟಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಸನ್ನ, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಪತ್ರಿಕಾಗೋಷ್ಠಿ ನಡೆಸದೆ ಶನಿವಾರವೇ ಫಲಿತಾಂಶ ಪ್ರಕಟಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.