ADVERTISEMENT

ಏ.23ರಿಂದ ಸಿಇಟಿ; ಆನ್‌ಲೈನ್‌ ಪರೀಕ್ಷೆ ಇಲ್ಲ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 6:16 IST
Last Updated 12 ಜನವರಿ 2019, 6:16 IST
ಸಿಇಟಿ ಕೌನ್ಸಿಲಿಂಗ್– ಸಾಂದರ್ಭಿಕ ಚಿತ್ರ
ಸಿಇಟಿ ಕೌನ್ಸಿಲಿಂಗ್– ಸಾಂದರ್ಭಿಕ ಚಿತ್ರ   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ 2019ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ವೇಳಾಪಟ್ಟಿ ಪ್ರಕಟವಾಗಿದ್ದು, ಏಪ್ರಿಲ್‌ 23, 24 ಮತ್ತು 25ರಂದು ಪರೀಕ್ಷೆ ನಡೆಯಲಿದೆ.

2019ನೇ ಸಾಲಿನ ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನ, ಆಯುಷ್‌(ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ಹೊಮಿಯೋಪಥಿ), ಫಾರ್ಮಸಿ, ಆರ್ಕಿಟೆಕ್ಚರ್‌ ಕೋರ್ಸ್‌ಗಳಿಗೆ ಪ್ರವೇಶ ಬಯಸುವವರು ಸಿಇಟಿ ಉತ್ತೀರ್ಣರಾಗಬೇಕು.

ಸಿಇಟಿ ಆನ್‌ಲೈನ್‌ ಪರೀಕ್ಷೆ ಈ ವರ್ಷ ಇಲ್ಲ

ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಈ ವರ್ಷವೇ ಆನ್‌ಲೈನ್‌ ಮೂಲಕ ನಡೆಸಲು ಸಾಧ್ಯವಾಗುವುದಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಗಳು ತಿಳಿಸಿವೆ.

ADVERTISEMENT

‘ಈ ವರ್ಷದಿಂದಲೇ ಆನ್‌ಲೈನ್‌ ಮೂಲಕ ಸಿಇಟಿ ಪರೀಕ್ಷೆ ನಡೆಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬುಧವಾರ ಪ್ರಕಟಿಸಿದ್ದರು. ಆದರೆ, ಗುರುವಾರ ಸಮಜಾಯಿಷಿ ನೀಡಿದ ಅವರು, ‘ಈ ವರ್ಷವೇ ಆರಂಭಿಸುತ್ತೇವೆ ಎಂದು ನಾನು ಹೇಳಿಲ್ಲ’ ಎಂದಿದ್ದಾರೆ.

‘ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲು ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಂದಿಲ್ಲ. ಈಗಾಗಲೇ ಜನವರಿ ತಿಂಗಳು ಆರಂಭವಾಗಿದೆ. ಇನ್ನು ಎರಡು–ಮೂರು ತಿಂಗಳಲ್ಲಿ ಅಗತ್ಯ ಸೌಲಭ್ಯವನ್ನು ಕಲ್ಪಿಸುವುದು ಕಷ್ಟ. 2020ರಿಂದ ಆರಂಭಿಸಬಹುದು.ತರಾತುರಿಯಲ್ಲಿ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲು ಹೋಗಿ ಸಮಸ್ಯೆ ಉದ್ಭವಿಸಿದರೆ, ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಇಟಿಯೂ ಸೇರಿದಂತೆ ಕೆಇಎ ನಡೆಸುವ ಎಲ್ಲ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸಲಾಗುವುದು ಎಂದಷ್ಟೇ ಹೇಳಿದೆ. ಕೆಲವು ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.