ಬೆಂಗಳೂರು: ಮಹಾರಾಷ್ಟ್ರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಸಮೀರ್ ಕುಮಾರ್ ಬಿಸ್ವಾಸ್ ನೇತೃತ್ವದ ನಿಯೋಗ ಸೋಮವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ, ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ಕಲೆಹಾಕಿತು.
ವೃತ್ತಿ ಶಿಕ್ಷಣ ಕೋರ್ಸ್‌ಗಳಗಳ ಪ್ರವೇಶಕ್ಕೆ ಕೆಇಎ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ. ದಾಖಲಾತಿಗಳ ಪರಿಶೀಲನೆ, ವಿವಿಧ ಕೋಟಾಗಳು, ರ್‍ಯಾಂಕಿಂಗ್, ಸೀಟು ಲಭ್ಯತೆಯ ವಿವರ, ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ, ದಾಖಲಾತಿಗಳ ಕುರಿತು ಸಮಗ್ರ ಮಾಹಿತಿ ಪಡೆಯಿತು.
‘ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಕೆಇಎ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತು ಸಮಗ್ರ ಮಾಹಿತಿ ಪಡೆದೆವು. ರಾಜ್ಯ ಸರ್ಕಾರಗಳು ನಡೆಸುವ ವೃತ್ತಿಪರ ಕೋರ್ಸ್‌ಗಳ ಸಿಇಟಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಬಳಸಿಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸೀಟ್ ಬ್ಲಾಕಿಂಗ್ ದಂಧೆ ನಡೆಸುತ್ತಿವೆ. ಕಳೆದ ವರ್ಷ ಕರ್ನಾಟಕದಲ್ಲಿ ಇಂತಹ ಪ್ರಕರಣಗಳು ಪತ್ತೆಯಾದ ನಂತರ ಇಡೀ ಸಿಇಟಿ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಈ ಎಲ್ಲ ಸುಧಾರಣಾ ಕ್ರಮಗಳನ್ನು ಮಹಾರಾಷ್ಟ್ರದಲ್ಲೂ ಅಳವಡಿಸಿಕೊಳ್ಳಲಾಗುವುದು’ ಎಂದು ಸಮೀರ್ ಕುಮಾರ್ ಬಿಸ್ವಾಸ್ ಹೇಳಿದರು.
‘ಸಿಇಟಿ ವ್ಯವಸ್ಥೆಯನ್ನು ಮೊದಲು ಜಾರಿ ಮಾಡಿದ್ದೇ ಕರ್ನಾಟಕ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಜತೆಗೆ, ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಯನ್ನೂ ನಡೆಸುತ್ತಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ನಕಲಿ ಅಭ್ಯರ್ಥಿಗಳ ಪತ್ತೆಗೆ ಜಾರಿ ಮಾಡಿರುವ ಮುಖ ಚಹರೆ ಪತ್ತೆ ತಂತ್ರಜ್ಞಾನ, ವೆಬ್‌ಕಾಸ್ಟಿಂಗ್ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿವೆ’ ಎಂದು ಮಹಾರಾಷ್ಟ್ರ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ಆಯುಕ್ತ ದಿಲೀಪ್ ಸರ್‌ದೇಸಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕೆಇಎ ಕಾರ್ಯವೈಖರಿ, ಪಾರದರ್ಶಕತೆ ಸಲುವಾಗಿ ಕೈಗೊಂಡ ಹಲವು ಸುಧಾರಣಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.