ಇ.ಡಿ
ಬೆಂಗಳೂರು: ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಆಕಾಶ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಮತ್ತು ನ್ಯೂ ಹೊರೈಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಕಚೇರಿಗಳು ಸೇರಿ ನಗರದ 18 ಕಡೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಶೋಧಕಾರ್ಯ ನಡೆಸಿದ್ದಾರೆ.
2024–25ನೇ ಸಾಲಿನ ಸಿಇಟಿಯಲ್ಲಿ ಸರ್ಕಾರಿ ಕೋಟಾದಡಿ ಈ ಕಾಲೇಜುಗಳಿಗೆ ಹಂಚಿಕೆಯಾಗಿದ್ದ ಎಂಜಿನಿಯರಿಂಗ್ ಸೀಟುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಎಇ) ಪೊಲೀಸರಿಗೆ ದೂರು ನೀಡಿತ್ತು. ಇ.ಡಿ ಸಹ ಪ್ರಕರಣ ದಾಖಲಿಸಿಕೊಂಡಿತ್ತು.
ಬಿಎಂಎಸ್, ಆಕಾಶ್ ಮತ್ತು ನ್ಯೂ ಹೊರೈಜಾನ್ ಕಾಲೇಜಿನ ಕ್ಯಾಂಪಸ್‌ಗಳ ಮೇಲೆ ಬುಧವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಸಂಜೆಯವರೆಗೂ ಶೋಧ ನಡೆಸಿದರು. ಬಿಎಂಎಸ್ ಶೈಕ್ಷಣಿಕ ಸಂಸ್ಥೆಗಳ ಟ್ರಸ್ಟಿಗಳ ಕಚೇರಿ, ಮನೆ ಮತ್ತು ಆಪ್ತರ ಮನೆಗಳಲ್ಲಿ ಶೋಧಕಾರ್ಯವು, ರಾತ್ರಿಯೂ ಮುಂದುವರಿದಿತ್ತು.
‘ಸೀಟ್ ಬ್ಲಾಕಿಂಗ್ ಹಲವು ವರ್ಷಗಳಿಂದ ನಡೆಯುತ್ತಿರುವ ಬಗ್ಗೆ ಅನುಮಾನವಿದ್ದು, ನಾಲ್ಕು ವರ್ಷಗಳ ದಾಖಲಾತಿ ವಿವರಗಳನ್ನು ಕಲೆಹಾಕಲಾಗಿದೆ. ಕೆಎಇಯಿಂದಲೂ ಸರ್ಕಾರಿ ಕೋಟಾದ ಸೀಟುಗಳ ವಿವರ ಪಡೆದುಕೊಂಡಿದ್ದು, ಕಾಲೇಜಿನ ದಾಖ ಲಾತಿಗಳನ್ನು ತಾಳೆ ನೋಡಲಾ ಗುತ್ತಿದೆ. ಈ ನಾಲ್ಕು ವರ್ಷದಲ್ಲೂ ಸಾವಿರಾರು ಸೀಟುಗಳನ್ನು, ಸೀಟ್ ಬ್ಲಾಕಿಂಗ್ ಮೂಲಕ ಮಾರಾಟ ಮಾಡಿರುವ ಸುಳಿವು ದೊರೆತಿದೆ’ ಎಂದು ಇ.ಡಿ ಮೂಲಗಳು ಖಚಿತಪಡಿಸಿವೆ.
‘ಬಿಎಂಎಸ್ ಶಿಕ್ಷಣ ಸಂಸ್ಥೆಗಳ ಜತೆಗೆ ನಿಕಟ ವ್ಯವಹಾರ ಹೊಂದಿದ್ದ ಮಧ್ಯ ವರ್ತಿಗಳ ಕಚೇರಿ ಮತ್ತು ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ಅವರು ಉತ್ತರ ಭಾರತದ ಹಲವು ಕೋಚಿಂಗ್ ಸೆಂಟರ್‌ಗಳ ಜತೆ ನಿರಂತರವಾಗಿ ಸಂಪರ್ಕ ಹೊಂದಿದ್ದದ್ದು ಪತ್ತೆಯಾಗಿದೆ. ಜತೆಗೆ ಆ ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳಿಗೆ, ಈ ಮೂರು ಕಾಲೇಜು ಗಳಲ್ಲಿ ಸೀಟು ಕೊಡಿಸಿರುವ ದಾಖಲೆಗಳು ಸಿಕ್ಕಿವೆ’ ಎಂದು ಮಾಹಿತಿ ನೀಡಿವೆ.
‘ತುಮಕೂರಿನ ಎಂಜಿನಿಯರಿಂಗ್ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳ ಮನೆಯಲ್ಲಿ ಶೋಧ ನಡೆಸಲಾಗಿದೆ. ಕೆಎಇ ಪೋರ್ಟಲ್‌ನಲ್ಲಿ ಈ ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚು ಬಾರಿ ಬೇರೆ–ಬೇರೆ ವಿದ್ಯಾರ್ಥಿಗಳ ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆ’ ಎಂದು ವಿವರಿಸಿವೆ.
₹62 ಲಕ್ಷಕ್ಕೆ ಸೀಟು ಮಾರಾಟ
‘ಸೀಟ್ ಬ್ಲಾಕಿಂಗ್ ಮೂಲಕ ಉಳಿಸಿಕೊಂಡಿದ್ದ ಎಂಜಿನಿಯರಿಂಗ್ ಸೀಟ್ ಒಂದನ್ನು ₹62 ಲಕ್ಷಕ್ಕೆ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಯೊಂದು ಮಧ್ಯವರ್ತಿಯೊಬ್ಬರ ಕಚೇರಿಯಲ್ಲಿ ಸಿಕ್ಕಿದೆ. ಇಂತಹ ಹತ್ತಾರು ರಸೀದಿಗಳು, ಹಣ ವರ್ಗಾವಣೆ ಪತ್ರಗಳು, ಚೆಕ್ ಸಂಖ್ಯೆಗಳು ದೊರೆತಿದ್ದರೂ ಅತಿದೊಡ್ಡ ಮೊತ್ತಕ್ಕೆ ಸೀಟು ಮಾರಾಟವಾಗಿರುವ ಪ್ರಕರಣ ಇದು’ ಎಂದು ಇ.ಡಿ ಮೂಲಗಳು ತಿಳಿಸಿವೆ.
‘₹62 ಲಕ್ಷವು ಕೋಚಿಂಗ್ ಸೆಂಟರ್, ಮಧ್ಯವರ್ತಿ ಮತ್ತು ಕಾಲೇಜುಗಳ ಮಧ್ಯೆ ಹಂಚಿಕೆಯಾಗಿದೆ. ಬೆಂಗಳೂರಿನಲ್ಲೇ ನೆಲಸಿರುವ ಉತ್ತರ ಭಾರತದ ವಿದ್ಯಾರ್ಥಿಯೊಬ್ಬ ಸೀಟಿನಲ್ಲಿ ಪ್ರವೇಶ ಪಡೆದಿದ್ದಾನೆ. ಇಂತಹ ಇನ್ನೂ ಹಲವು ವಿದ್ಯಾರ್ಥಿಗಳು ಇದ್ದು, ಅವರ ವಿವರ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.