ಕೆಇಎ
ಬೆಂಗಳೂರು: ವಿಶೇಷ ಕೆಟಗರಿಗಳ ಅಡಿ ‘ಸಿಇಟಿ-2025’ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಂಬಂಧಿಸಿದ ಪ್ರಮಾಣಪತ್ರಗಳನ್ನು ಮೇ 5ರಿಂದ 14ರ ಒಳಗೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಗೆ ಖುದ್ದು ಸಲ್ಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಡಿಫೆನ್ಸ್, ಎಕ್ಸ್-ಡಿಫೆನ್ಸ್, ಸಿಎಪಿಎಫ್, ಸಿಆರ್‌ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಐಟಿಬಿಪಿ, ಎಕ್ಸ್-ಸಿ ಎಪಿಎಫ್, ಸ್ಕೌಟ್ಸ್ ಮತ್ತು ಗೈಡ್ಸ್, ಆಂಗ್ಲೊ ಇಂಡಿಯನ್ ಹಾಗೂ ಎನ್‌ಸಿಸಿ ಕೋಟಾದಡಿ ಸೀಟು ಕ್ಲೇಮು ಮಾಡಿರುವ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಿಎಪಿಎಫ್, ಸಿಆರ್‌ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಟಿಬಿಪಿ ಅಡಿ ಕ್ಲೇಮು ಮಾಡಿರುವವರು ಮೇ 5ರಂದು ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಎಕ್ಸ್- ಡಿಫೆನ್ಸ್, ಎಕ್ಸ್–ಸಿಎಪಿಎಫ್ ಅಭ್ಯರ್ಥಿಗಳು ಮೇ 6 ಹಾಗೂ 7ರಂದು, ಡಿಫೆನ್ಸ್ ಕ್ಲೇಮು ಮಾಡಿರುವವರು 8 ಹಾಗೂ 9ರಂದು, ಸ್ಕೌಟ್ಸ್ ಮತ್ತು ಗೈಡ್ಸ್, ಆಂಗ್ಲೊ ಇಂಡಿಯನ್ ಕೋಟಾ ಕೋರಿರುವವರು 12ರಂದು ಮತ್ತು ಎನ್‌ಸಿಸಿ ಕ್ಲೇಮು ಮಾಡಿರುವವರು 13 ಹಾಗೂ 14ರಂದು ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಬೆಳಿಗ್ಗೆ 10.30ರಿಂದ ಸಂಜೆ 5:30ರ ಒಳಗೆ ಹಾಜರಾಗಿ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಕ್ರೀಡಾ ಕೋಟಾದಡಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಸಲ್ಲಿಸಲು ಶೀಘ್ರ ದಿನಾಂಕ ಪ್ರಕಟಿಸಲಾಗುವುದು ಎಂದೂ ತಿಳಿಸಲಾಗಿದೆ.
ಮೂಲದಾಖಲೆ ಪರಿಶೀಲನೆ: ಸಿಇಟಿ- 25ರ ಅರ್ಜಿ ನಮೂನೆಯಲ್ಲಿ ಅರ್ಹತಾ ಕಂಡಿಕೆ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಗಳಡಿ ಸೀಟು ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಮೇ 5ರಿಂದ 15ರವರೆಗೆ ಮೂಲ ದಾಖಲೆಗಳ ಖುದ್ದು ಪರಿಶೀಲನೆ ನಡೆಯಲಿದೆ. ದಾಖಲಾತಿ ಪರಿಶೀಲನೆಗೆ ಹಾಜರಾಗುವ ಮೊದಲು ಅರ್ಹತಾ ಕ್ಲಾಸ್ ಕೋಡ್ ಅಡಿಯಲ್ಲಿ ಪ್ರಮಾಣಪತ್ರಗಳನ್ನು ಸಲ್ಲಿಸುವ ಬಗ್ಗೆ ಕೆಇಎ ವೆಬ್ ಸೈಟ್ http://kea.kar.nic.in ನಲ್ಲಿ ಹಾಗೂ ಇ-ಬ್ರೋಷರ್‌ನಲ್ಲಿ ವಿವರಿಸಲಾಗಿದೆ.
ದಾಖಲಾತಿ ಪರಿಶೀಲನೆಗೆ ಬರುವ ಮೊದಲು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್‌ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ನಿಗದಿಯಾದ ದಿನದಂದೇ ಪರಿಶೀಲನೆಗೆ ಹಾಜರಾಗಬೇಕು ಎಂದೂ ಪ್ರಸನ್ನ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.