ADVERTISEMENT

ಚೈತ್ರಾ ಕುಂದಾಪುರಗೆ ಜ್ವರ: ವೆನ್ಲಾಕ್‌ಗೆ ದಾಖಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 18:04 IST
Last Updated 26 ಅಕ್ಟೋಬರ್ 2018, 18:04 IST
ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ   

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಚೈತ್ರಾ ಕುಂದಾಪುರ ಅವರ ನಡುವಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯ ಹದಗೆಟ್ಟಿದ್ದು, ನಗರದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಳ್ಯ ಜೆಎಂಎಫ್ಸಿ ನ್ಯಾಯಾಲಯವು ಚೈತ್ರಾ ಕುಂದಾಪುರ ಹಾಗೂ ಅವರ ಬೆಂಬಲಿಗರಿಗೆ ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ನಗರದ ಕಾರಾಗೃಹದಲ್ಲಿದ್ದಾರೆ. ಚೈತ್ರಾ ಕುಂದಾಪುರ ಅವರಿಗೆ ತೀವ್ರದ ಜ್ವರ ಕಾಣಿಸಿಕೊಂಡಿದ್ದರಿಂದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ವಿಡಿಯೊ ಮೂಲಕ ಸ್ಪಷ್ಟೀಕರಣ ನೀಡಿರುವ ಚೈತ್ರಾ ಕುಂದಾಪುರ, ‘ನನ್ನನ್ನು ನಾನು ರಕ್ಷಣೆ ಮಾಡಲು ಗುರುಪ್ರಸಾದ್‌ನನ್ನು ಹಿಂದಕ್ಕೆ ತಳ್ಳಿರುವುದಾಗಿ’ ಹೇಳಿಕೊಂಡಿದ್ದಾರೆ.

ADVERTISEMENT

‘ಹಲ್ಲೆಗೊಳಗಾದ ಗುರುಪ್ರಸಾದ್ ಪಂಜ ಹಾಗೂ ಆಶಿತ್ ಕಲ್ಲಾಜೆ ಎನ್ನುವ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತನ್ನ ಬಗ್ಗೆ ಅಶ್ಲೀಲ ರೀತಿಯ ಕಮೆಂಟ್‌ಗಳನ್ನು ಹಾಕಿದ್ದಾರೆ. ಇವೆಲ್ಲವನ್ನು ಸಹಿಸಿಕೊಂಡು ನಾನು ಸುಮ್ಮನಿದ್ದೆ. ಆದರೆ ಬುಧವಾರ ಸಂಪುಟ ನರಸಿಂಹ ಮಠಕ್ಕೆ ಬಂದ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಹಾಗೂ ಆತನ ಸಹಚರರು ನನ್ನ ಕಾರನ್ನು ಅಡ್ಡಗಟ್ಟಿದ್ದರು. ಅಲ್ಲದೆ ಗ್ಲಾಸ್‌ಗಳನ್ನು ಒಡೆಯಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾರಿನಿಂದ ಇಳಿದು ಬಂದಾಗ ಗುರುಪ್ರಸಾದ್ ನನ್ನ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಹೀಗಾಗಿ ನನ್ನನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ನಾನು ಅವರನ್ನು ಹಿಂದಕ್ಕೆ ತಳ್ಳಬೇಕಾಯಿತು’ ಎಂದು
ಚೈತ್ರಾ ಕುಂದಾಪುರ ಹೇಳಿದ್ದಾರೆ.

ಈ ಮಧ್ಯೆ, ಗುರುವಾರ ಬಂದ್‌ ನಂತರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಜನಜೀವನ ಸಹಜ ಸ್ಥಿತಿಗೆ ಮರಳಿತು ಭಕ್ತರು ಎಂದಿನಂತೆ ದೇವರ ದರ್ಶನ ಪಡೆದರೆ, ಅಂಗಡಿಗಳು ನಿತ್ಯದಂತೆ ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.