ADVERTISEMENT

ಪ್ರಿಯಾಂಕ್ ಖರ್ಗೆ ಕುಮ್ಮಕ್ಕಿನಿಂದಲೇ ದಾಳಿ: ಛಲವಾದಿ ನಾರಾಯಣಸ್ವಾಮಿ

ಚಿತ್ತಾಪುರ ಘೇರಾವ್‌ ಘಟನೆ: ರಾಜ್ಯಪಾಲರಿಗೆ ಛಲವಾದಿ ದೂರು

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:08 IST
Last Updated 22 ಮೇ 2025, 16:08 IST
<div class="paragraphs"><p>ಛಲವಾದಿ ನಾರಾಯಣಸ್ವಾಮಿ</p></div>

ಛಲವಾದಿ ನಾರಾಯಣಸ್ವಾಮಿ

   

ಬೆಂಗಳೂರು: ‘ಕಲಬುರಗಿಯ ಚಿತ್ತಾಪುರದ ಸರ್ಕಾರಿ ಅತಿಥಿ ಗೃಹದಲ್ಲಿ ನನ್ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿದ ಕೃತ್ಯದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ನೇರ ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಸಚಿವ ಸ್ಥಾನದಿಂದ ಇಳಿಸಬೇಕು’ ಎಂದು ಒತ್ತಾಯಿಸಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಘಟನೆ ಕುರಿತು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮೂರು ಪ್ರತ್ಯೇಕ ಪತ್ರ ಬರೆದಿರುವ ಅವರು, ‘ಈ ಬಗ್ಗೆ ಉನ್ನತಮಟ್ಟದ ಮತ್ತು ಸ್ವತಂತ್ರ್ಯ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಆಪರೇಷನ್‌ ಸಿಂಧೂರ’ದಲ್ಲಿ ಭಾಗಿಯಾದ ಸೈನಿಕರ ಗೌರವಾರ್ಥ ಬಿಜೆಪಿಯಿಂದ ಆಯೋಜಿಸಲಾಗಿದ್ದ ತಿರಂಗಾ ಯಾತ್ರೆಯ ಭಾಗವಾಗಿ ನಾನು ಚಿತ್ತಾಪುರಕ್ಕೆ ಹೋಗಿದ್ದೆ. ಆಗ ನಾನು ಉಳಿದಿದ್ದ ಅತಿಥಿ ಗೃಹಕ್ಕೆ, ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮರಳು ದಂಧೆಯ 50ಕ್ಕೂ ಹೆಚ್ಚು ಮಂದಿ ಮುತ್ತಿಗೆ ಹಾಕಿದರು. ಪ್ರತಿಭಟನೆ ನಡೆಸಿದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಸಂಜೆ 6ರ ವೇಳೆಗೆ ಪ್ರತಿಭಟನಕಾರರು ಅತಿಥಿ ಗೃಹದ ಆವರಣಕ್ಕೆ ನುಗ್ಗಿ, ಅಲ್ಲಿ ನಿಲ್ಲಿಸಿದ್ದ ನನ್ನ ಅಧಿಕೃತ ವಾಹನದ ಮೇಲೆ ಮಸಿ ಎರಚಿದರು. ಅತಿಥಿ ಗೃಹದ ಕಿಟಕಿ–ಬಾಗಿಲುಗಳನ್ನು ಬಡಿದು, ಅವಾಚ್ಯವಾಗಿ ನಿಂದಿಸಿದರು. 100ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರೂ, ಪ್ರತಿಭಟನಕಾರರನ್ನು ಚದುರಿಸುವ ಕೆಲಸ ಮಾಡಲಿಲ್ಲ’ ಎಂದು ಆರೋಪಿಸಿದ್ದಾರೆ.

‘ಜಿಲ್ಲಾ ಪೊಲೀಸ್‌ ಎಸ್‌ಪಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರ ಗೂಂಡಾಗಿರಿಗೆ, ಪೊಲೀಸರು ಪ್ರೇಕ್ಷಕರಾಗಿದ್ದರು. ಈ ರೀತಿ ಸುಮಾರು ಆರು ತಾಸು ನನ್ನನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದರು. ಹಿಂದೆಯೂ ಈ ರೀತಿ ಅನೇಕ ಘಟನೆಗಳು ನಡೆದಿವೆ’ ಎಂದಿದ್ದಾರೆ.

‘ಗೂಂಡಾಗಿರಿ ನಡೆಸಿದವರನ್ನು ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕರ್ತವ್ಯಲೋಪ ಎಸಗಿದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ನನಗೆ ನೀಡಿರುವ ಭದ್ರತೆಯನ್ನು ಕೂಡಲೇ ಹೆಚ್ಚಿಸಬೇಕು. ಈ ಸಂಬಂಧ ಗೃಹ ಇಲಾಖೆಗೆ ನಿರ್ದೇಶನ ನೀಡಿ’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.