ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬೇಜವಾಬ್ದಾರಿ ಹಾಗೂ ಆಘಾತಕಾರಿಯಾಗಿದೆ ಎಂದು ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ದೇವಸ್ಥಾನದ ಮೇಲೆ ಜಾತ್ಯತೀತ ಪಟ್ಟಿಯನ್ನು ಹಾಕುವ ಅವಶ್ಯಕತೆ ಇಲ್ಲ. ಇದು ಸಹಜವಾಗಿಯೇ ಬಹುತ್ವದ ತತ್ವದ ಮೇಲೆ ಇರುವುದರಿಂದ ಆಧುನಿಕತೆಯ ಕಾಲದಲ್ಲಿ ಜಾತ್ಯಾತೀತವಾಗಿ ನೋಡಬಹುದು. ಆದರೆ, ಇದು ಭಾರತೀಯ ಧರ್ಮ, ಹಿಂದೂ ಧರ್ಮಕ್ಕೆ ಸೇರಿರುವಂತಹ ಶಕ್ತಿ ಪೀಠ. ಕೋಟ್ಯಂತರ ಮಂದಿ ಚಾಮುಂಡಿ ತಾಯಿಯ ಮೇಲಿನ ನಂಬಿಕೆಯಿಂದ ಬರುತ್ತಾರೆ, ಒಳಿತಾಗಲೆಂದು ಪ್ರಾರ್ಥಿಸುತ್ತಾರೆ' ಎಂದರು.
'ಅವರ ಹೇಳಿಕೆ ಖಂಡನೀಯವಾದುದು. ಮುಂದೆ ಅವರು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು' ಎಂದು ಒತ್ತಾಯಿಸಿದರು.
'ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ಚಾಮುಂಡಿ ಬೆಟ್ಟವನ್ನು ಅವರ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಆಂಜನೇಯ ದೇವಸ್ಥಾನವನ್ನೂ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಹಿಂದೂ ದೇವಾಲಯಗಳನ್ನು ಮಾತ್ರವೇ ಗುರಿಯಾಗಿಟ್ಟುಕೊಂಡು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ, ಹಿಂದೂ ಧರ್ಮಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಕೊಡುವುದು ಈ ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಾಗುತ್ತಾ ಬಂದಿದೆ. ಇದು ನಿಜಕ್ಕೂ ಖಂಡನೀಯ ಬೆಳವಣಿಗೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿರುವ ಬೆಳವಣಿಗೆ ಹಾಗೂ ಹೇಳಿಕೆಗಳ ಕಾರಣದಿಂದಲೇ ನಾನು ಖಂಡನೆ, ವಿರೋಧ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದೇನೆ' ಎಂದರು.
'ಇಂತಹ ಹೇಳಿಕೆಗಳನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅದರಲ್ಲೂ ಜವಾಬ್ದಾರಿ ಸ್ಥಾನದಲ್ಲಿ ಇರುವಂತಹ ಉಪಮುಖ್ಯಮಂತ್ರಿ ಅವರಿಂದ ಇಂತಹ ಆಘಾತಕಾರಿ ಹೇಳಿಕೆ ಬಂದಿರುವುದು ಸರಿಯಲ್ಲ' ಎಂದು ಹೇಳಿದರು.
'ಈ ಸರ್ಕಾರದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಧರ್ಮಸ್ಥಳದ ವಿಷಯದಲ್ಲೂ ಅದನ್ನು ನೋಡಬಹುದು. ಎಸ್‌ಐಟಿ ತನಿಖೆ ನಡೆಯುತ್ತಿದ್ದು ದಿನಕ್ಕೊಂದು ಸತ್ಯ ಹೊರಬರುತ್ತಿದೆ. ಅಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆದಿವೆಯೋ ಅದರ ಬಗ್ಗೆಯೂ ಬಹಳ ಪ್ರಶ್ನೆಗಳಿವೆ' ಎಂದರು.
'ಡಿ.ಕೆ. ಶಿವಕುಮಾರ್ ಅವರು ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ್ದರು. ಆರ್‌ಎಸ್ಎಸ್ ಪದ್ಧತಿ ಬಗ್ಗೆ ಕಾಳಜಿ ಹಾಗೂ ಜಾಗೃತಿ ಇದೆ ಎಂದಿದ್ದರು. ಅದಕ್ಕೆ ಅವರ ಪಕ್ಷದಿಂದ ಹಾಗೂ ಬೆಂಬಲಿಗರಿಂದ ವ್ಯಕ್ತವಾದ ಕಾರಣ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅದನ್ನು ಮುಚ್ಚಿ ಹಾಕಿಕೊಳ್ಳಲು, ಸಮತೋಲನ ಮಾಡುವುದಕ್ಕಾಗಿ ಹಾಸ್ಯಾಸ್ಪದ ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.
'ರಾಜ್ಯದಲ್ಲಿ ಅನೇಕ ಗಂಭೀರವಾದ ಸಮಸ್ಯೆಗಳಿವೆ. ಆದರೆ, ಈ ಸರ್ಕಾರದವರು ಅವುಗಳನ್ನು ಮರೆಮಾಚಲು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಮೈಸೂರಿನಲ್ಲಿ ಮಾದಕವಸ್ತು ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದಾಗ ಟಿಪ್ಪು ವಿಚಾರವನ್ನು ಮುಂದೆ ತಂದರು. ಅದೇ ರೀತಿ ಈಗ ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಕುಸಿತ ಕಂಡಿದೆ ಎಂದು ಸಿಎಜಿ ವರದಿ ಬಂದಿರುವುದನ್ನು ಮುಚ್ಚಿ ಹಾಕಲು, ಧರ್ಮಸ್ಥಳದ ವಿಚಾರದಲ್ಲಿ ಸತ್ಯ ಹೊರಬರುತ್ತಿರುವುದನ್ನು ಮರೆ ಮಾಚಲು ಹಾಸ್ಯಾಸ್ಪದ ಹೇಳಿಕೆ ಕೊಡುತ್ತಿದ್ದಾರೆ' ಎಂದು ಆರೋಪಿಸಿದರು.
'ಧರ್ಮಸ್ಥಳದಲ್ಲಿ ನಡೆದಿರುವ ಎಸ್‌ಐಟಿ ತನಿಖೆಯ ಪ್ರಗತಿಯ ಬಗ್ಗೆ ಅಧಿಕೃತವಾಗಿ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದರು.
'ಸರ್ಕಾರವು ದೇವಾಲಯಗಳನ್ನು ಧಾರ್ಮಿಕ ಆಚರಣೆಯಷ್ಟೇ ಅಲ್ಲ ಪ್ರವಾಸೋದ್ಯಮ ಸ್ಥಳ ಎಂದು ನೋಡುತ್ತಿದೆ. ಚಾಮುಂಡಿ ಬೆಟ್ಟ ಮೊದಲನೇಯದಾಗಿ ಧಾರ್ಮಿಕ ಸ್ಥಳ. ಹಿಂದೂ ಧರ್ಮ ಪಾಲಿಸುವವರದೇ ಆಗಿದೆ. ಆದ್ದರಿಂದ ಈ ಬೆಟ್ಟ ಹಿಂದೂಗಳ ಆಸ್ತಿಯೇ. ಅದು ಹಾಗೆಯೇ ಮುಂದುವರಿಯಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಉಪಮುಖ್ಯಮಂತ್ರಿಯು ಆಘಾತಕಾರಿ ಹೇಳಿಕೆ ನೀಡಿದಾಕ್ಷಣ ಬದಲಾವಣೆಯೇನೂ ಆಗುವುದಿಲ್ಲ' ಎಂದು ಪ್ರತಿಪಾದಿಸಿದರು.
'ಹಿಂದೂ ಧರ್ಮ ಉಳಿಸುವ ಪರವಾಗಿಯೇ ನಾವು ಸದಾ ಇರುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಧಾರ್ಮಿಕ ಚೌಕಟ್ಟಿನ ರಕ್ಷಣೆಗಾಗಿ ಹೋರಾಡುತ್ತೇವೆ. ಭಾರತದಲ್ಲಿ ಎಲ್ಲ ಧರ್ಮವನ್ನೂ ಒಪ್ಪಿಕೊಳ್ಳಬೇಕು. ಆದರೆ, ಬೇರೆ ಧರ್ಮ ಸರಿ ಇಲ್ಲ, ಯಾವುದೋ ಒಂದು ಧರ್ಮ ಸರಿ ಇದೆ ಎಂದಾಗ ನಾವು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ' ಎಂದರು.
'ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಹೋರಾಟ ಮಾಡಿಯೇ ಮಾಡುತ್ತೇವೆ. ಇನ್ನೂ ಗಂಭೀರವಾಗಿ ಹೋರಾಡುತ್ತೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.