ಚನ್ನಪಟ್ಟಣ: ಉಪ ಚುನಾವಣೆ ಫಲಿತಾಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ. ಒಗ್ಗಟ್ಟಾಗಿ ಹೋರಾಟ ಮಾಡೋಣ. ಕ್ಷೇತ್ರದ 87 ಸಾವಿರಕ್ಕೂ ಹೆಚ್ಚು ಜನ ಮತ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಹೋರಾಡೋಣ ಎಂದು ಚನ್ನಪಟ್ಟಣ ಉಪ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಕೂಡ್ಲೂರಿನಲ್ಲಿ ಶನಿವಾರ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಉಪ ಚುನಾವಣೆಯ ಸೋಲಿನ ಹೊಣೆ ಹೊತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಜಯಮುತ್ತು ಅವರಿಗೆ ರಾಜೀನಾಮೆ ವಾಪಸ್ ಪಡೆಯುವಂತೆ ಸಲಹೆ ನೀಡಿದ ಅವರು, ಉದ್ವೇಗಕ್ಕೆ ಒಳಗಾಗಿ ಜಯಮುತ್ತು ಅವರು ಫಲಿತಾಂಶದ ನೈತಿಕ ಹೊಣೆ ಹೊರುತ್ತೇನೆ ಅಂದಿದ್ದಾರೆ. ಆದರೆ ಎಲ್ಲರೂ ಸಾಮೂಹಿಕವಾಗಿ ನೈತಿಕ ಹೊಣೆ ಹೊರಬೇಕು ಎಂದರು.
ನನ್ನ ಮೇಲೆ ಅನುಮಾನ ಬೇಡ:
ಇಡೀ ರಾಜ್ಯ ಸರ್ಕಾರವನ್ನೇ ಎದುರಿಸಿದ್ದೀರಿ. ನಿಮ್ಮ ಪಾದಗಳಿಗೆ ನಮಸ್ಕರಿಸಿ ಕೇಳ್ತೇನೆ ನನ್ನ ಮೇಲೆ ಅನುಮಾನ ಪಡಬೇಡಿ. ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೆ.
ಇತ್ತೀಚಿಗೆ ವಿಧಾನ ಚುನಾವಣೆಯಲ್ಲೂ ಕೆಲವು ಕಾರಣಗಳಿಂದ ಸೋತಿದ್ದೇನೆ. ಬಳಿಕ ಪಕ್ಷದ ಸಂಘಟನೆ ಜವಾಬ್ದಾರಿ ಹೊತ್ತು ರಾಜ್ಯ ಪ್ರವಾಸ ಮಾಡ್ತಿದ್ದೇನೆ. ಆದರೆ ಅನಿರೀಕ್ಷಿತವಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಅನಿವಾರ್ಯ ಆಯ್ತು ಎಂದು ತಿಳಿಸಿದರು.
ಕುಮಾರಣ್ಣ ಅವರಿಗೆ ಮೂರು ಬಾರಿ ಆಪರೇಷನ್ ಆದ್ರೂ ಪಕ್ಷ ಉಳಿಸಲು ಹೋರಾಟ ಮಾಡ್ತಿದ್ದಾರೆ. ಏಕಾಂಗಿ ಹೋರಾಟಕ್ಕೆ ಬೆಂಬಲ ನೀಡಿದ್ದು ಇದೇ ಚನ್ನಪಟ್ಟಣ ತಾಲ್ಲೂಕು. ಕುಮಾರಣ್ಣ ರಾಮನಗರ, ಚನ್ನಪಟ್ಟಣ ಎರಡೂ ಕಡೆ ಸ್ಪರ್ಧೆ ಮಾಡಿದ್ರು. ಎರಡೂ ಕಡೆ ಗೆದ್ದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣ ಉಳಿಸಿಕೊಂಡಿದ್ರು.
ಎರಡು ಬಾರಿ ಕುಮಾರಣ್ಣನ ಅನುಪಸ್ಥಿತಿಯಲ್ಲಿ ಚುನಾವಣೆ ಮಾಡಿ ಗೆಲ್ಲಿಸಿದ್ದೀರಿ.ಇಂದು ಕೂಡಾ ಹಳ್ಳಿಹಳ್ಳಿಗಳಿಂದ ಬಂದು ಬೆಂಬಲ ಕೊಡ್ತಿದ್ದೀರಿ ನಿಮ್ಮ ಸಹಕಾರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
ನಾನು ಮನೆಯಲ್ಲಿ ಕೂರುವವನಲ್ಲ:
2004ರಲ್ಲಿ ಜೆಡಿಎಸ್ 54 ಸೀಟು ಪಡೆದಿತ್ತು. ಮುಂದಿನ ಚುನಾವಣೆಗೆ ಅದೇ ರೀತಿಯ ಹೋರಾಟ ಮಾಡಬೇಕು. ಕಾರ್ಯಕರ್ತರು, ಮುಖಂಡರು ನಮಗೆ ಬಲ ತುಂಬಬೇಕು. ಸೋತ ಮಾತ್ರಕ್ಕೆ ನಾನು ಮನೆಯಲ್ಲಿ ಕೂರುವವನಲ್ಲ. ಮೂರು ಬಾರಿ ಸೋತ್ರೂ ಎದೆಗುಂದುವುದಿಲ್ಲ. ಯಾವುದೇ ಮುಖಂಡರು, ಕಾರ್ಯಕರ್ತರು ಕಣ್ಣಲ್ಲಿ ನೀರು ಹಾಕಬೇಡಿ. ನಾವು ಸತ್ತಿಲ್ಲ, ಸೋತಿದ್ದೀವಿ ಅಷ್ಟೇ. ನನಗಿನ್ನು 35 ವರ್ಷ ವಯಸ್ಸು. ರಾಜ್ಯದ ಜನತೆಯ ಆಶೀರ್ವಾದ ನಮ್ಮ ಜತೆ ಇದೆ ಎಂದು ತಿಳಿಸಿದರು.
ಕೊಟ್ಟ ಮಾತು ಹಿಂಪಡೆಯಲ್ಲ:
ಸರ್ಕಾರದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ನಮ್ಮ ತಂದೆಯವರಿಗೆ ಎಂಟು ಬಾರಿ ಅವಕಾಶ ಕೊಟ್ಟಿದ್ದೀರಿ.ನಾನು ಸೋತಿದ್ದೇನೆ ಅಂದಾಕ್ಷಣ ಕೊಟ್ಟ ಮಾತು ವಾಪಸ್ಸ್ ಪಡೆಯಲ್ಲ. ಕುಮಾರಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ ಸಿಕ್ಕಿರೋ ಅವಕಾಶದಲ್ಲಿ ಕೆಲಸ ಮಾಡ್ತಾರೆ.ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕೆಲಸ ಮಾಡ್ತೇವೆ ಎಂದು ಹೇಳಿದರು.
ದಯಮಾಡಿ ನನ್ನ ಮೇಲೆ ಯಾರೂ ಅನುಮಾನ ಪಡೆಯಬೇಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಈ ಪಕ್ಷವನ್ನ ದಡ ಮುಟ್ಟಿಸಬೇಕು. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರ್ತೀನಿ. 2018ರಲ್ಲಿ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು. ಆ ಕಾಲ ಮತ್ತೆ ಬರಲಿದೆ, ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲ್ಲು ಕೆಲಸ ಮಾಡೋಣ ಎಂದರು.
ಜನಾಭಿಪ್ರಾಯಕ್ಕೆ ತಲೆಬಾಗಲೇಬೇಕು:
ಕುಮಾರಣ್ಣ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ರು. ಆದರೆ ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು.ಯಾರ ಮೇಲೂ ದೂರುವ ಪ್ರಶ್ನೆ ಇಲ್ಲ. ಎಲ್ಲರೂ ಸಾಮೂಹಿಕ ಹೊಣೆ ಹೊತ್ತು ಮುಂದೆ ಜಿಲ್ಲೆಯ ನಾಲ್ಕು ಕ್ಷೇತ್ರ ಗೆಲ್ಲುವ ಗುರಿ ಇಟ್ಟು ಕೊಳ್ಳೊಣ. ಎಲ್ಲರ ಮುಖದಲ್ಲಿ ನಗು ಇರಲಿ, ಯಾರೂ ಬೇಸರ ಮಾಡಿಕೊಳ್ಳೊದು ಬೇಡ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.