
ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನ ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಈ ಕುರಿತಂತೆ ಪ್ರಕರಣದ ಪ್ರಾಸಿಕ್ಯೂಟರ್ ಅಶೋಕ್ ಎನ್.ನಾಯಕ್ ಅವರು, ‘ಶಾಸಕರು–ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರಿಗೆ 4,236 ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದರು.
ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಹಿನ್ನೆಲೆ ಹಾಗೂ ತನಿಖೆ ಬಾಕಿ ಇರುವ ಕಾರಣ ಸದ್ಯದ ದೋಷಾರೋಪ ಪಟ್ಟಿಯಿಂದ ಅವರ ಹೆಸರನ್ನು ಹೊರಗಿಡಲಾಗಿದೆ. ಬೈರತಿ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ (ಡಿ.22) ಬೆಳಿಗ್ಗೆ ನಡೆಯಲಿದೆ.
ತಲೆಮರೆಸಿಕೊಂಡಿರುವ ಬೈರತಿ ಬಸವರಾಜ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಗೋವಾ, ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣಗಳಲ್ಲೂ ಕಣ್ಣೀಟ್ಟಿರುವ ಪೊಲೀಸರು, ಶಾಸಕರ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿದ್ದಾರೆ.
ಪ್ರಕರಣವೇನು?: ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಿನಿ ಅವೆನ್ಯೂ ರಸ್ತೆಯಲ್ಲಿರುವ ಸೇಫ್ ಮೆಡಿಕಲ್ ಸ್ಟೋರ್ ಮುಂಭಾಗ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವುನನ್ನು 2025ರ ಜುಲೈ 15ರಂದು 8 ರಿಂದ 9 ಜನರಿದ್ದು ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.