ADVERTISEMENT

ಸರ್ಕಾರಿ ಗೌರವದೊಂದಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 23:56 IST
Last Updated 23 ಮಾರ್ಚ್ 2023, 23:56 IST
   

ಶ್ರವಣಬೆಳಗೊಳ: ಜೈನ ಸಂಪ್ರದಾಯದಂತೆ, ಸೂರ್ಯಾಸ್ತಕ್ಕೂ ಮುನ್ನವೇ ಗುರುವಾರ ಸಂಜೆ 6.05ಕ್ಕೆ ಬೆಟ್ಟದ ತಪ್ಪಲಿನಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಿತು. ಮೂರು ಕುಶಾಲು ತೋಪುಗಳನ್ನು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಸಂಜೆಯ ವೇಳೆಗೆ ಚಾವುಂಡರಾಯ ಮಂಟಪದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ನಮೋಕಾರ ಮಹಾಮಂತ್ರ, ಮಹಾಶಾಂತಿಧಾರ ಪಠಣ, ವಿವಿಧ ಮಂಗಲವಾದ್ಯಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಭಕ್ತರು ಅಂತಿಮ ನಮನ ಸಲ್ಲಿಸಿದರು. ಚಂದ್ರಗಿರಿ ಚಿಕ್ಕಬೆಟ್ಟಕ್ಕೆ ಹೊಂದಿಕೊಂಡಿರುವ ತಾವರಕಟ್ಟೆಯ ಬೋಳುಬೆಟ್ಟದವರೆಗೆ ಮೆರವಣಿಗೆ ನಡೆಯಿತು.

ಸ್ವಾಮೀಜಿಯ ಪಾರ್ಥಿವ ಶರೀರವನ್ನು ಚಿತೆಯಲ್ಲಿ ಕುಳ್ಳಿರಿಸಿ, ಶಾಂತಿಧಾರ ಪಠಿಸಲಾಯಿತು. ನಂತರ ಗಂಧ, ಅರಿಷಿಣ, ಚಂದನ, ಕಷಾಯ, ಕ್ಷೀರ, ತುಪ್ಪ, ಎಳನೀರು, ವಿವಿಧ ಜಲಗಳಿಂದ ಅಭಿಷೇಕ ಮಾಡಲಾಯಿತು. ಗಂಧದ ಕಟ್ಟಿಗೆಯಿಂದ ತಯಾರಿಸಿದ ಚಿತೆಯಲ್ಲಿ ಕೊಬ್ಬರಿ, ತುಪ್ಪ ಹಾಕಲಾಯಿತು. ನಂತರ ಮಠದ ಉತ್ತರಾಧಿಕಾರಿ ಆಗಮ ಕೀರ್ತಿಯವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಆರತಿಪುರದ ಸಿದ್ಧಾಂತ ಕೀರ್ತಿ ಸ್ವಾಮೀಜಿ, ಸೋಂದಾ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ, ಕಂಬದಹಳ್ಳಿಯ ಭಾನುಕೀರ್ತಿ ಸ್ವಾಮೀಜಿ, ಕಾರ್ಕಳದ ಲಲಿತಕೀರ್ತಿ ಸ್ವಾಮೀಜಿ, ಎನ್‌.ಆರ್‌.ಪುರದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಸ್ವಾಮೀಜಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ವಿವಿಧ ಕ್ಷೇತ್ರಗಳ ಗಣ್ಯರು ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ಭದ್ರತೆಗಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.