ADVERTISEMENT

ಪೆಟ್ರೋಲ್ ಬಾಂಬ್‌ ಎಸೆತ ಪ್ರಕರಣದಲ್ಲಿ ಭಾಗಿಯಾಗಿದ್ದ ‘ಚತುರ್’

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 13:22 IST
Last Updated 2 ಜೂನ್ 2019, 13:22 IST
ಡಾ.ಎಂ.ಎಂ.ಕಲಬುರ್ಗಿ (ಸಂಗ್ರಹ ಚಿತ್ರ)
ಡಾ.ಎಂ.ಎಂ.ಕಲಬುರ್ಗಿ (ಸಂಗ್ರಹ ಚಿತ್ರ)   

ಬೆಳಗಾವಿ: ಹಿರಿಯ ಸಂಶೋಧಕ ಧಾರವಾಡದ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿರುವ ಪ್ರಮುಖ ಆರೋಪಿ ಪ್ರವೀಣ್ ಪ್ರಕಾಶ್ ಚತುರ್ (27), ಹೋದ ವರ್ಷ ಜ. 25ರಂದು ಇಲ್ಲಿನ ಪ್ರಕಾಶ್ ಚಿತ್ರಮಂದಿರದಲ್ಲಿ ‘ಪದ್ಮಾವತ್‌’ ಹಿಂದಿ ಚಲನಚಿತ್ರ ಪ್ರದರ್ಶನದ ವೇಳೆ ನಡೆಸಿದ್ದ ಪೆಟ್ರೋಲ್‌ ಬಾಂಬ್‌ ಸ್ಫೋಟ ಪ್ರಕರಣದ 4ನೇ ಆರೋಪಿ.

ಚಿತ್ರಮಂದಿರದ ಆವರಣದಲ್ಲಿ ನಡೆದಿದ್ದ ಘಟನೆಯಲ್ಲಿ ಯಾವುದೇ ಪ್ರಣಾಪಾಯ ಉಂಟಾಗಿರಲಿಲ್ಲ. ದ್ವಿಚಕ್ರವಾಹನದಲ್ಲಿ ಬಂದ ಕಿಡಿಗೇಡಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಸ್ಫೋಟಗೊಳಿಸಿ ಆತಂಕ ಸೃಷ್ಟಿಸಿ ಪರಾರಿಯಾಗಿದ್ದರು. ಈ ಕಿಡಿಗೇಡಿಗಳ ತಂಡದಲ್ಲಿದ್ದ ಚತುರ್‌, ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವ ಮಾಹಿತಿ ಆಧರಿಸಿ ಎಸ್‌ಐಟಿಯವರು ಬಂಧಿಸಿದ್ದಾರೆ.

ಪೆಟ್ರೋಲ್ ಬಾಂಬ್‌ ಸ್ಫೋಟ ಪ್ರಕರಣದಲ್ಲಿ, ಪರಶುರಾಮ್ ಕಾಕತ್‌ಕರ್, ಸುನೀಲ್ ಪಾಟೀಲ, ಗಣೇಶ ಹಾಗೂ ಪ್ರವೀಣ್ ಪ್ರಕಾಶ್ ಚತುರ್ ಬಂಧಿಸಲಾಗಿತ್ತು. ‘ಪ್ರಕಾಶ್‌ಗೆ ಮಸಾಲಾವಾಲ ಎನ್ನುವ ಹೆಸರು ಕೂಡ ಇದೆ. ಆತ, ಸನಾತನ ಸಂಸ್ಥೆಯ ಭಾಗವಾದ ಶಿವ ಪ್ರತಿಷ್ಠಾನದೊಂದಿಗೆ ಗುರುತಿಸಿಕೊಂಡಿದ್ದ. ಹಿಂದುತ್ವಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದ. ಪ್ರಕಾಶ್ ಚಿತ್ರಮಂದಿರ ಮೇಲಿನ ದಾಳಿ ವೇಳೆಯೂ ಚತುರ್‌ನೇ ಬೈಕ್ ಓಡಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಚೇರಿ ಗಲ್ಲಿಯ ಮಹಾತ್ಮಫುಲೆ ರಸ್ತೆಯ ನಿವಾಸಿಯಾಗಿರುವ ಈತ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಶಸ್ತ್ರಾಸ್ತ ಹಾಗೂ ಸ್ಫೋಟಕ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ. ಹಿಂದುತ್ವ ಪರ ಸಂಘಟನೆಗಳ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದ. ಹತ್ಯೆ ಪ‍್ರಕರಣದ ಸಂಚಿನಲ್ಲಿ ಭಾಗಿಯಾಗಿದ್ದ. ಹೀಗಾಗಿ, ಆತನಿಗೆ ಮಾಹಿತಿ ಇರುವುದರಿಂದಾಗಿ ಎಸ್‌ಐಟಿಯವರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

‘ಚತುರ್‌ ಪೆಟ್ರೋಲ್ ಬಾಂಬ್ ಎಸೆತ ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದ. ಆತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದುಕೊಂಡಿದ್ದ. ಶಿವ ಪ್ರತಿಷ್ಠಾನ ಎನ್ನುವ ಸಂಘಟನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಎನ್ನುವ ಮಾಹಿತಿ ಇದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.