ADVERTISEMENT

‘ಅವಿವೇಕ’ ಎಂದು ವಿವೇಕಾನಂದರಿಗೆ ಅವಮಾನ: ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:47 IST
Last Updated 15 ನವೆಂಬರ್ 2022, 20:47 IST
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ   

ಆನವಟ್ಟಿ (ಶಿವಮೊಗ್ಗ): ‘ವಿವೇಕ’ ಯೋಜನೆಯನ್ನು ‘ಅವಿವೇಕ’ ಎನ್ನುವ ಮೂಲಕವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ವಾಮಿ ವಿವೇಕಾನಂದರನ್ನು ಅವಮಾನಿಸಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಮಂಗಳವಾರ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ವಿವೇಕ ಎಂದರೆ ಜ್ಞಾನ. ಆ ಹೆಸರಿನಲ್ಲಿಯೇ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ. ಅದನ್ನು ಸಹಿಸದೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗದ ಯಾವುದೇ ನಾಯಕರನ್ನುಬೆಳೆಯಲು ಬಿಡದೇ ಚೂರು ಚೂರು ಮಾಡಿದರು. ಹಿಂದುಳಿದವರ ಹೃದಯ ಸಾಮ್ರಾಟರು ಅಂದರೆ ಅದು ರಾಜ್ಯದಲ್ಲಿ ದೇವರಾಜ ಅರಸು ಹಾಗೂ ಅವರ ಹಾದಿಯಲ್ಲಿ ನಡೆದು ಬಂದ ಎಸ್.ಬಂಗಾರಪ್ಪ ಮಾತ್ರ‘ ಎಂದರು.

ADVERTISEMENT

ತಕರಾರಿನ ಕಾರಣ ದಂಡಾವತಿ ನೀರಾವರಿ ಯೋಜನೆ ವಿಳಂಬ: ‘ದಂಡಾವತಿ ನೀರಾವರಿ ಯೋಜನೆಯನ್ನು ಆಂಧ್ರಪ್ರದೇಶದ ತಕರಾರಿನ ಕಾರಣ ಸಂಪೂರ್ಣ ಸೊರಬ ತಾಲ್ಲೂಕಿಗೆ ವಿಸ್ತರಿಸಲು ಆಗಿರಲಿಲ್ಲ. ಶಾಸಕ ಕುಮಾರ್ ಬಂಗಾರಪ್ಪ ಅವರ ಮನವಿ ಮೇರೆಗೆ ಈಗ ಬೇರೆ ರೂಪದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದು ಸಿಎಂ ಭರವಸೆ ನೀಡಿದರು.

ಆತುರದ ನಿರ್ಧಾರ ಬೇಕಿರಲಿಲ್ಲ’
ಚಾಮರಾಜನಗರ: ‘ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳುವ ಅಗತ್ಯವಿರಲಿಲ್ಲ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕೇಸರಿ ಬಣ್ಣ ತ್ಯಾಗದ ಪ್ರತೀಕ. ಎಲ್ಲರೂ ಗೌರವ ಕೊಡುತ್ತಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.