ADVERTISEMENT

ಆರ್​​ಎಸ್ಎಸ್ ನಿಷೇಧಿಸಬೇಕೆಂದು ನಾವ್ಯಾರೂ ಹೇಳಿಲ್ಲ: ಸಚಿವ ಎನ್‌. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 15:23 IST
Last Updated 5 ಜುಲೈ 2025, 15:23 IST
ಎನ್‌. ಚಲುವರಾಯಸ್ವಾಮಿ, ಸಚಿವ 
ಎನ್‌. ಚಲುವರಾಯಸ್ವಾಮಿ, ಸಚಿವ    

ಬೆಂಗಳೂರು: ‘ಆರ್​​ಎಸ್ಎಸ್ ನಿಷೇಧಿಸಬೇಕೆಂದು ಮುಖ್ಯಮಂತ್ರಿಯಾಗಲಿ, ನಾನಾಗಲಿ ಎಲ್ಲೂ ಹೇಳಿಲ್ಲ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಚಟುವಟಿಕೆ ಆರೋಗ್ಯಕರವಾಗಿ ಇರಲಿ ಎಂಬ ಉದ್ದೇಶದಿಂದ, ಸಚಿವ ಪ್ರಿಯಾಂಕ್​ ಖರ್ಗೆ ಅವರು ಆರ್‌ಎಸ್‌ಎಸ್‌ ನಿಷೇಧಿಸುತ್ತೇವೆಂದು ಹೇಳಿರಬಹುದು’ ಎಂದರು.

‘ಮುಖ್ಯ ಕಾರ್ಯದರ್ಶಿ ವಿರುದ್ಧ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎನ್‌. ರವಿಕುಮಾರ್ ಅವರ ಹೇಳಿಕೆ ಯಾರೂ ಒಪ್ಪುವಂಥದ್ದಲ್ಲ. ಆದರೆ, ಈ ಹೇಳಿಕೆಯನ್ನು ಬಿಜೆಪಿ ನಾಯಕರಾದ ಪ್ರಲ್ಹಾದ ಜೋಶಿ, ಬಿ.ವೈ. ವಿಜಯೇಂದ್ರ, ಆರ್. ಅಶೋಕ ಖಂಡಿಸಿಲ್ಲ‌. ಒಬ್ಬ ಮಹಿಳಾ ಅಧಿಕಾರಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಆ ರೀತಿ ಹೇಳಿರಬಹುದು’ ಎಂದು ಸ್ಪಷ್ಟಪಡಿಸಿದರು.‌

ADVERTISEMENT

‘ಆರ್​​ಎಸ್ಎಸ್ ವಿಚಾರಕ್ಕೆ ಬಂದರೆ ಭಸ್ಮ ಆಗುತ್ತಾರೆ’ ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ‘ನಾವೆಲ್ಲ ಭಸ್ಮ ಆಗಲು ಅವರೇನು ಶಿವನಾ? ಅಥವಾ ವಿಷ್ಣುನಾ? ಅಂಥ ಶಕ್ತಿಯನ್ನು ಸದಾನಂದಗೌಡರು ಪಡೆದುಕೊಂಡಿದ್ದರಾ? ಗಟ್ಟಿ ಧ್ವನಿಯಲ್ಲಿ ಹೇಳುವುದು ತಪ್ಪಲ್ಲ. ಆದರೆ, ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯಲಿ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ, ‘ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆಯಲ್ಲ. ಯಾಕೆ ಮಹದಾಯಿಗೆ ಅವಕಾಶ ಕೊಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.