ADVERTISEMENT

ಕನ್ನಡದಲ್ಲಿ ಚೆಕ್ ಬರೆದಿದ್ದಕ್ಕೆ ವಾಪಸ್‌

ಎಸ್‌ಬಿಐನಲ್ಲಿ ಕನ್ನಡ ವಿರೋಧಿ ಧೋರಣೆಗೆ ಗ್ರಾಹಕರೊಬ್ಬರ ಬೇಸರ, ಪರಿಹಾರಕ್ಕೆ ಮೊರೆ

ಎಂ.ರಾಘವೇಂದ್ರ
Published 1 ನವೆಂಬರ್ 2018, 19:36 IST
Last Updated 1 ನವೆಂಬರ್ 2018, 19:36 IST
ಕನ್ನಡದಲ್ಲಿ ಬರೆದಿರುವ ಚೆಕ್
ಕನ್ನಡದಲ್ಲಿ ಬರೆದಿರುವ ಚೆಕ್   

ಸಾಗರ: ಚೆಕ್‌ನಲ್ಲಿ ಕನ್ನಡದಲ್ಲಿ ಬರೆದರು ಎನ್ನುವ ಕಾರಣಕ್ಕೆ ಅದನ್ನು ಮರಳಿಸಿದ ಬ್ಯಾಂಕ್ ವಿರುದ್ಧ ಗ್ರಾಹಕರೊಬ್ಬರು ₹ 2 ಲಕ್ಷ ಪರಿಹಾರ ಕೊಡುವಂತೆ ಒತ್ತಾಯಿಸಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಸಿದ್ದಿವಿನಾಯಕ ಅಡಿಕೆ ಮಂಡಿಯವರು ಬೆಳೆಗಾರರಿಗೆ ವಿತರಿಸಿದ್ದ ಎರಡು ಚೆಕ್ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ಮರಳಿ ಬಂದಿತ್ತು. ಆಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನ ಸ್ಥಳೀಯ ಶಾಖೆಯನ್ನು ಮಂಡಿಯವರು ಸಂಪರ್ಕಿಸಿದಾಗ, ಮರಳಿ ಚೆಕ್ ಹಾಕುವಂತೆ ಸೂಚನೆ ನೀಡಲಾಗಿತ್ತು. ಆದರೆ, ಬ್ಯಾಂಕ್‌ನಿಂದ ಯಾವ ಕಾರಣಕ್ಕಾಗಿ ಚೆಕ್ ಅನ್ನು ಮರಳಿಸಲಾಗಿದೆ ಎಂದು ಮಂಡಿಯವರಿಗೆ ಬರೆದ ಪತ್ರದಲ್ಲಿ ನಮೂದಿಸಿರಲಿಲ್ಲ. ನಂತರ ಮಂಡಿಯವರು ಬ್ಯಾಂಕ್‌ನೊಂದಿಗೆ ಪತ್ರ ವ್ಯವಹಾರ ನಡೆಸಿದಾಗಲೇ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವ ಕಾರಣಕ್ಕೆ ಚೆಕ್ ಹಿಂತಿರುಗಿಸಲಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದಿವಿನಾಯಕ ಮಂಡಿಯವರು, ‘ಈ ಧೋರಣೆಯಿಂದ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆಯಾಗಿದೆ, ಇದಕ್ಕೆ ಸಾಂಕೇತಿಕವಾಗಿ ₹ 3 ಪರಿಹಾರ ನೀಡಬೇಕು’ ಎಂದು ಪತ್ರ ಬರೆದರು. ಬ್ಯಾಂಕ್‌ನವರು ಇದಕ್ಕೆ ಒಪ್ಪಿ ಪರಿಹಾರ ಎಂದೇ ಮಂಡಿಯವರ ಖಾತೆಗೆ ₹ 3ನ್ನು ಜಮಾ ಮಾಡಿದ್ದಾರೆ.

ADVERTISEMENT

ಇಷ್ಟಕ್ಕೇ ಬ್ಯಾಂಕ್‌ನ ಕನ್ನಡ ವಿರೋಧಿ ಧೋರಣೆ ನಿಂತಿಲ್ಲ. ಕಳೆದ ಸೆ.9ರಂದು ಇದೇ ಮಂಡಿಯವರು ಕನ್ನಡದಲ್ಲಿ ಬರೆದ ಮತ್ತೊಂದು ಚೆಕ್ ಅನ್ನು ಬೆಳೆಗಾರರಿಗೆ ನೀಡಿದ್ದು, ಅದು ಕೂಡ ಮರಳಿ ಬಂದಿದೆ. ಚೆನ್ನೈನಲ್ಲಿರುವ ಸೆಂಟ್ರಲೈಸ್ಡ್ ಚೆಕ್ ಪ್ರಾಸೆಸಿಂಗ್‌ ಸೆಂಟರ್ (ಸಿಪಿಸಿಸಿ) ನಿಂದ ಸಿದ್ದಿವಿನಾಯಕ ಮಂಡಿಯ ಪಾಲುದಾರರಲ್ಲಿ ಒಬ್ಬರಾಗಿರುವ ಮಾಧವ ಚಿಪ್ಳಿಯವರಿಗೆ ಫೋನ್ ಮೂಲಕ ಅಧಿಕಾರಿಯೊಬ್ಬರು, ‘₹ 1 ಲಕ್ಷ ಮೊತ್ತದ ಚೆಕ್ ಅನ್ನು ಕೊಟ್ಟಿದ್ದು ನೀವೇನಾ?’ ಎಂದು ವಿಚಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮಾಧವ ಅವರು, ‘ನೀವು ಬ್ಯಾಂಕ್‌ ಅಧಿಕಾರಿ ಎಂದು ನಂಬುವುದು ಹೇಗೆ’ ಎಂದು ಪ್ರಶ್ನಿಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ನಾವು ವಿಚಾರಿಸಿದಾಗ, ‘ಸರಿಯಾದ ಮಾಹಿತಿ ನೀಡಲಿಲ್ಲ ಎಂಬ ಸಬೂಬು ಹೇಳಿ ಚೆಕ್ ಅನ್ನು ಹಿಂದಿರುಗಿಸಿದ್ದಾರೆ.

ರಿಸರ್ವ್‌ ಬ್ಯಾಂಕ್ ನಿಯಮಗಳ ಪ್ರಕಾರ ಚೆಕ್ ಅನ್ನು ಇಂಗ್ಲಿಷ್ ಮಾತ್ರವಲ್ಲದೆ ಇತರ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು. ಆದರೆ ಚೆನ್ನೈನಲ್ಲಿ ಸಿಪಿಸಿಸಿ ಘಟಕ ಇರುವುದರಿಂದ ಕನ್ನಡದಲ್ಲಿ ಬರೆದ ಚೆಕ್ ಪುರಸ್ಕೃತ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಸಿದ್ದಿ ವಿನಾಯಕ ಮಂಡಿಯವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.