ADVERTISEMENT

‘ಭಾವಿ ಮುಖ್ಯಮಂತ್ರಿ’ ವಿಚಾರ: ‘ಕೈ’ ತಿಕ್ಕಾಟ; ವರಿಷ್ಠರ ಭೇಟಿಗೆ ‘ತಟಸ್ಥ’ ಬಣ

ವೇಣುಗೋಪಾಲ್‌ ಜತೆ ಹರಿಪ್ರಸಾದ್‌, ಮುನಿಯಪ್ಪ ಇಂದು ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 20:50 IST
Last Updated 27 ಜೂನ್ 2021, 20:50 IST
   

ಬೆಂಗಳೂರು: ‘ಭಾವಿ ಮುಖ್ಯಮಂತ್ರಿ’ ವಿಚಾರದಲ್ಲಿ ಶಾಸಕರು ನೀಡುತ್ತಿರುವ ಹೇಳಿಕೆಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ‘ಬಣ ರಾಜಕೀಯ’ ಸೃಷ್ಟಿಯಾಗಿರುವ ಮಧ್ಯೆಯೇ, ಇದೇ ವಿಚಾರದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಮತ್ತೊಂದು ಬಣ ಮುಂದಾಗಿದೆ.

‘ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣದ ಮಧ್ಯೆ ನಡೆಯುತ್ತಿರುವ ತಿಕ್ಕಾಟವನ್ನು ವರಿಷ್ಠರ ಗಮನಕ್ಕೆ ತರಲು ಹಿರಿಯ ನಾಯಕರೂ ಆಗಿರುವ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮತ್ತು ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಈಗಾಗಲೇ ದೆಹಲಿ ತಲುಪಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಶಾಸಕ ಜಿ. ಪರಮೇಶ್ವರ ಜೊತೆ ಶನಿವಾರ ಇವರಿಬ್ಬರೂ ಚರ್ಚೆ ನಡೆಸಿದ್ದರು.

‘ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದ ಈ ನಾಯಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಸೋಮವಾರ ಭೇಟಿ ಮಾಡುವ ಸಾಧ್ಯತೆ ಇದೆ. ಕೇಂದ್ರದ ಹಿರಿಯ ನಾಯಕರು ಮಧ್ಯಪ್ರವೇಶಿಸಿ ಎರಡೂ ಬಣಗಳನ್ನು ನಿಯಂತ್ರಿಸುವಂತೆ ಅವರು ಮನವಿ ಮಾಡಲಿದ್ದಾರೆ’ ಎಂದೂ ಮೂಲಗಳು ಹೇಳಿವೆ. ವೇಣುಗೋಪಾಲ್‌, ಈ ಹಿಂದೆ ರಾಜ್ಯದ ಉಸ್ತುವಾರಿ ಹೊಂದಿದ್ದರು.

ADVERTISEMENT

‘ಪಕ್ಷ ಅಧಿಕಾರಕ್ಕೆ ಬರುವ ಮೊದಲೇ ಮುಂದಿನ ಮುಖ್ಯಮಂತ್ರಿ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಬೆಂಬಲಿಗರು ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಆಗಲಿದೆ. ಹಲವು ನಾಯಕರು, ಶಾಸಕರು, ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದವರು ಎರಡೂ ಗುಂಪಿನ ಜೊತೆ ಗುರುತಿಸಿಕೊಂಡಿಲ್ಲ. ನಾಯಕತ್ವ ವಿಚಾರದಲ್ಲಿ ಇತ್ತೀಚಿನ ಹೇಳಿಕೆಗಳನ್ನು ಅವರು ಗಂಭೀರವಾಗಿಪರಿಗಣಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಪರಮೇಶ್ವರ– ದಿನೇಶ್‌ ಭೇಟಿ: ಈ ಮಧ್ಯೆ, ಮುಂದಿನ ಮುಖ್ಯಮಂತ್ರಿ ಬಗ್ಗೆ ಶಾಸಕರು ನೀಡುತ್ತಿರುವ ಹೇಳಿಕೆಗಳು ಮತ್ತು ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಗೆಳ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಶಾಸಕ ಜಿ. ಪರಮೇಶ್ವರ ಮತ್ತು ದಿನೇಶ್‌ ಗುಂಡೂರಾವ್‌ ಭಾನುವಾರ ಚರ್ಚೆ ನಡೆಸಿದ್ದಾರೆ.

ಚರ್ಚೆಯ ನಂತರ ಮಾತನಾಡಿದ ಪರಮೇಶ್ವರ, ‘ನಮ್ಮ ಭೇಟಿಗೆ ರಾಜಕೀಯದ ಅರ್ಥ ಕಲ್ಪಿಸುವುದು ಬೇಕಿಲ್ಲ. ರಾಜಕೀಯ ಬೆಳವಣಿಗೆ ಎಂಬ ಅರ್ಥ ಕಲ್ಪಿಸುವುದು ಬೇಡ. ಕೋವಿಡ್‌ ಕಾರಣದಿಂದ ಇತ್ತೀಚೆಗೆ ನಮ್ಮ ಭೇಟಿ ಸಾಧ್ಯವಾಗಿರಲಿಲ್ಲ’ ಎಂದರು.

‘ಭಾವಿ ಮುಖ್ಯಮಂತ್ರಿ‘ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದೆಲ್ಲ ನೀವೇ (ಮಾಧ್ಯಮಗಳು) ಕಲ್ಪಿಸಿರುವುದು. ನೀವೇ ಹೇಳುವುದರಿಂದ ವಿಷಯ ದೊಡ್ಡದಾಗುತ್ತಿದೆ. ಈ ಹೇಳಿಕೆಗಳಿಗೆ ನಾವು ಯಾರೂ ಬದ್ಧರಾಗಿಲ್ಲ. ಶಾಸಕರು ಸಾಂದರ್ಭಿಕವಾಗಿ ಹೇಳಿಕೆಗಳನ್ನು ನೀಡಿರಬಹುದು ಅಷ್ಟೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.