ADVERTISEMENT

ಬಿಜೆಪಿಗೆ ಅಭ್ಯರ್ಥಿಗೆ ಮತ ಹಾಕಿದರೆ ಸರ್ಕಾರ ಉರುಳಿಸುವ ಪ್ರಯತ್ನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:37 IST
Last Updated 25 ಮಾರ್ಚ್ 2019, 20:37 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: ‘ಬಿಜೆಪಿ ಅಭ್ಯರ್ಥಿ (ಬಿ.ಎನ್.ಬಚ್ಚೇಗೌಡ) ಒಕ್ಕಲಿಗರು ಎಂದು ಒಕ್ಕಲಿಗರು ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೆ ಮುಂದೆ ಬಿಜೆಪಿಯವರೇ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಾರೆ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಲೋಕಸಭೆ ಚುನಾವಣೆ ಮುಂಚೆಯೇ ಸಮ್ಮಿಶ್ರ ಸರ್ಕಾರ ಉರುಳಿಸಬೇಕು ಎಂದು ಪ್ರಯತ್ನಪಟ್ಟರು. ಆದರೆ ಅದು ಕೈಗೂಡಲಿಲ್ಲ. ಇದೀಗ ಈ ಚುನಾವಣೆಯಲ್ಲಿ 22 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಬೀಳಿಸುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ, ಪ್ರತಿಯೊಬ್ಬರೂ ಜಾತ್ಯತೀತ ಪಕ್ಷಕ್ಕೆ ಮತ ನೀಡಬೇಕು’ ಎಂದು ತಿಳಿಸಿದರು.

‘ನಾನು ಮೈತ್ರಿ ಪಕ್ಷದ ಅಭ್ಯರ್ಥಿಯಾದ್ದರಿಂದ ಎರಡು ಪಕ್ಷಗಳ ಮತಗಳು ಸೇರಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕಾಗಿದೆ. ಆದ್ದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕು. ಈ ವಿಚಾರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.