ADVERTISEMENT

ಕಿಟಕಿಯಿಂದ ಬಿದ್ದು ಮಗು ಸಾವು

ವೈಟ್‌ಫೀಲ್ಡ್ ಬಳಿಯ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 8 ಮೇ 2019, 19:58 IST
Last Updated 8 ಮೇ 2019, 19:58 IST

ಬೆಂಗಳೂರು: ವೈಟ್‌ಫೀಲ್ಡ್ ಸಮೀಪದ ನಲ್ಲೂರಹಳ್ಳಿಯ ಬಾಲಾಜಿ ಪುರುಷರ ಪೇಯಿಂಗ್ ಗೆಸ್ಟ್‌ ಕಟ್ಟಡದ ಕಿಟಕಿಯಿಂದ ಬಿದ್ದು ಅನ್ವಿತಾ ಎಂಬ ಒಂದು ವರ್ಷದ ಮಗು ಮೃತಪಟ್ಟಿದೆ.

ರಾಯಚೂರಿನ ಶಿವಕುಮಾರ್ ಹಾಗೂ ಗೀತಾ ದಂಪತಿಯ ಮಗು. ತಾಯಿ ಕೆಲಸ ಮಾಡುತ್ತಿದ್ದ ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲೇ ಈ ಅವಘಡ ಸಂಭವಿಸಿದೆ.

ಎರಡು ವರ್ಷಗಳ ಹಿಂದೆ ದಂಪತಿ ನಗರಕ್ಕೆ ಬಂದಿದ್ದಾರೆ. ಶಿವಕುಮಾರ್ ಕೂಲಿ ಕಾರ್ಮಿಕರಾಗಿದ್ದು, ಗೀತಾ ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಕಂಬಿಗಳಿಲ್ಲದ ಕಿಟಕಿ: ‘ಗೀತಾ ಅವರು ಮಗುವಿನ ಸಮೇತ ನಿತ್ಯವೂ ಪೇಯಿಂಗ್‌ ಗೆಸ್ಟ್‌ ಕಟ್ಟಡಕ್ಕೆ ಹೋಗಿ ಕೆಲಸ ಮಾಡಿ ಬರುತ್ತಿದ್ದರು. ಕೆಲಸದ ವೇಳೆ ಮಗುವನ್ನು ಕಟ್ಟಡದಲ್ಲೇ ಆಟವಾಡಲು ಬಿಡುತ್ತಿದ್ದರು. ಮೇ 6ರಂದು ಬೆಳಿಗ್ಗೆ ಮಗು ಆಟವಾಡುತ್ತಿದ್ದ ವೇಳೆ ಮೊದಲ ಮಹಡಿಯ ಕಿಟಕಿಯಿಂದ ಬಿದ್ದಿತ್ತು’ ಎಂದು ವೈಟ್‌ಫೀಲ್ಡ್ ಪೊಲೀಸರು ಹೇಳಿದರು.

‘ಸ್ಥಳೀಯರೇ ಮಗುವನ್ನು ಗಮನಿಸಿ ತಾಯಿಗೆ ತಿಳಿಸಿದ್ದರು. ನಂತರ, ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ’ ಎಂದು ತಿಳಿಸಿದರು.

‘ಘಟನೆ ಬಗ್ಗೆ ದೂರು ನೀಡಿರುವ ತಾಯಿ ಗೀತಾ, ‘ಕಟ್ಟಡದ ಕಿಟಕಿಗಳಿಗೆ ಕಂಬಿ ಇರಲಿಲ್ಲ. ಅಳವಡಿಸುವಂತೆ ಮಾಲೀಕರಿಗೆ ಸಾಕಷ್ಟು ಬಾರಿ ಹೇಳಿದ್ದೆ. ಈಗ ಅವರ ನಿರ್ಲಕ್ಷ್ಯದಿಂದಲೇ ನನ್ನ ಮಗು ಮೃತಪಟ್ಟಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂಬುದಾಗಿ ಒತ್ತಾಯಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.