ADVERTISEMENT

ಶಾಲೆಗಳ ಸ್ಥಗಿತದಿಂದ ಬಾಲಕಾರ್ಮಿಕರು ಹೆಚ್ಚಳ: ಸಚಿವ ಸುರೇಶ್ ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:30 IST
Last Updated 7 ಜನವರಿ 2021, 19:30 IST
ಎಸ್.ಸುರೇಶ್‌ಕುಮಾರ್
ಎಸ್.ಸುರೇಶ್‌ಕುಮಾರ್   

ಬೆಂಗಳೂರು: ‘ಕೋವಿಡ್‌ನಿಂದಾಗಿ ಶಾಲೆಗಳು ಸ್ಥಗಿತವಾಗಿದ್ದ ಕಾರಣ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಅಂತಹವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ದೊಡ್ಡ ಸವಾಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪ್ರೆಸ್ ಇನ್ಫರ್ಮೇಷನ್ ಬ್ಯುರೊದ (ಪಿಐಬಿ) ಬೆಂಗಳೂರು ಕೇಂದ್ರವು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ ‌‘ಕೋವಿಡ್ ವಿಭಿನ್ನ ಆಯಾಮಗಳು’ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದರು.

‌‘ಕೋವಿಡ್‌ನಿಂದ ಶಿಕ್ಷಣ ಕ್ಷೇತ್ರ ಅತ್ಯಂತ ದೂರಗಾಮಿ ಪರಿಣಾಮ ಎದುರಿಸಿದೆ. ಶಾಲೆಗಳು ಇರದ ಕಾರಣ ಬಾಲ ಕಾರ್ಮಿಕರ ಸಂಖ್ಯೆ ಜಾಸ್ತಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದ್ದಾರೆ. ಕೆಲವೆಡೆ ಬಾಲ್ಯವಿವಾಹದ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಶಿಕ್ಷಣ ಇಲಾಖೆಗೆ ಇದು ಅತ್ಯಂತ ಸವಾಲಿನ ವರ್ಷವಾಗಿದೆ. ಇನ್ನೂ ನಾಲ್ಕು ತಿಂಗಳು ಸಂಕಷ್ಟದ ಸಮಯವನ್ನು ಎದುರಿಸಬೇಕಿದೆ’ ಎಂದರು.

ADVERTISEMENT

ಪಠ್ಯ ಕಡಿತವಿಲ್ಲ: ‘ಕೋವಿಡ್‍ನ ಸಂಕಷ್ಟದ ಸಮಯದಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ತರಗತಿಗೆ ಬರುತ್ತಿರುವ ಮಕ್ಕಳ ಹಾಜರಾತಿ ಹೆಚ್ಚುತ್ತಿರುವುದು ಸಮಾಧಾನ ತಂದಿದೆ. ವಿಷಯ ತಜ್ಞರ ಜತೆಗೆ ಚರ್ಚಿಸಿ, ಎಸ್ಸೆಸ್ಸೆಲ್ಸಿ ಪಠ್ಯದಲ್ಲಿ ಶೇ 30ರಷ್ಟು ಕಡಿತಮಾಡಲಾಗಿದೆ. ಮಕ್ಕಳಲ್ಲಿನ ಒತ್ತಡ ನಿವಾರಿಸಲು ಹಾಗೂ ಕನಿಷ್ಠ ಕಲಿಕೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. 1ರಿಂದ 9ನೇ ತರಗತಿಗಳ ಪಠ್ಯಕ್ರಮದಲ್ಲಿ ಕಡಿತ ಇರುವುದಿಲ್ಲ’ ಎಂದು ತಿಳಿಸಿದರು.

‘ತಿಂಗಳ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ’
‘ಯೂರೋಪ್ ದೇಶಗಳಲ್ಲಿ ಕೋವಿಡ್ ಎರಡನೇ ಅಲೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಭಾರತದಲ್ಲೂ ಎರಡನೇ ಅಲೆ ಪ್ರಾರಂಭವಾಗುವ ಲಕ್ಷಣಗಳು ಕಂಡುಬಂದಿದ್ದು, ಜನವರಿ ಮೂರನೇ ವಾರ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಹಾಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡರೂ ಇನ್ನಷ್ಟು ದಿನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆರೋಗ್ಯ ಇಲಾಖೆಯ ಸಂಶೋಧನಾ ಅಧಿಕಾರಿ ಡಾ. ಮೊಹಮ್ಮದ್ ಷರೀಫ್ ಎಚ್ಚರಿಕೆ ನೀಡಿದರು.

‘ರೂಪಾಂತರ ವೈರಾಣುವಿನ ಲಕ್ಷಣ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಾಸ ಇರುವುದಿಲ್ಲ. ಆದರೆ, ಇದು ವೇಗವಾಗಿ ಹರಡುತ್ತದೆ. ಬ್ರಿಟನ್‍ನಿಂದ ಕರ್ನಾಟಕಕ್ಕೆ ಬಂದವರಲ್ಲಿ 112 ಮಂದಿ ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜನ ಗುಂಪಾಗಿ ಒಂದೆಡೆ ಸೇರಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.