ADVERTISEMENT

ರಾಜ್ಯದಲ್ಲಿ 80 ಸಾವಿರ ಬಾಲ ಗರ್ಭಿಣಿಯರು

ಬೆಂಗಳೂರು, ಬೆಳಗಾವಿ, ವಿಜಯಪುರ, ತುಮಕೂರು ಜಿಲ್ಲೆಗಳಲ್ಲಿ ಅಧಿಕ ಪ್ರಕರಣ

ಖಲೀಲಅಹ್ಮದ ಶೇಖ
Published 26 ಆಗಸ್ಟ್ 2025, 23:29 IST
Last Updated 26 ಆಗಸ್ಟ್ 2025, 23:29 IST
   

ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 80,813 ಬಾಲಕಿಯರು ಗರ್ಭಿಣಿಯರಾದ ಪ್ರಕರಣಗಳು ದಾಖಲಾಗಿವೆ.   

2023ರಿಂದ 2025ರ ಜುಲೈವರೆಗಿನ ಅವಧಿಯಲ್ಲಿ 14ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಗರ್ಭಿಣಿಯರಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಪೋರ್ಟಲ್‌ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 8,891, ಬೆಳಗಾವಿಯಲ್ಲಿ 8,169, ವಿಜಯಪುರದಲ್ಲಿ 6,229, ತುಮಕೂರಿನಲ್ಲಿ 4,282 ರಾಯಚೂರು 4,100, ಮೈಸೂರಿನಲ್ಲಿ 3,952, ಚಿತ್ರದುರ್ಗದಲ್ಲಿ 3,448, ಬಾಗಲಕೋಟೆಯಲ್ಲಿ 3,384, ಕಲಬುರಗಿಯಲ್ಲಿ 3,383, ಬಳ್ಳಾರಿಯಲ್ಲಿ 2,677, ಹಾಸನದಲ್ಲಿ 2,526 ಅತಿ ಹೆಚ್ಚು ಬಾಲ ಗರ್ಭಿಣಿಯರಿದ್ದರೆ, ಉಡುಪಿಯಲ್ಲಿ ಅತಿ ಕಡಿಮೆ (182) ಬಾಲ ಗರ್ಭಿಣಿಯರಿದ್ದಾರೆ.

ADVERTISEMENT

‘ಶಾಲೆ ಬಿಟ್ಟ ಮಕ್ಕಳು, ಬಾಲ್ಯವಿವಾಹ, ಮೊಬೈಲ್ ಮತ್ತಿತರ ವಸ್ತುಗಳ ಆಮಿಷ, ಸಾಮಾಜಿಕ ಮಾಧ್ಯಮಗಳ ಬಳಕೆ, ಪ್ರೀತಿಯ ನೆಪದಲ್ಲಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವುದು ಹೆಚ್ಚಾಗಿ ಕಂಡು ಬಂದಿವೆ. ಇದರಲ್ಲಿ ಪೋಕ್ಸೊ ಪ್ರಕರಣಗಳ ಸಂಖ್ಯೆಯೇ ಅಧಿಕವಾಗಿವೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಾಲ ಗರ್ಭಿಣಿಯರಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ ಮೂಲಕ ಜಾಗೃತಿ ಮೂಡಿಸಬೇಕು. ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳನ್ನು ಗುರುತಿಸಿ, ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಬಾಲ ಗರ್ಭಿಣಿಯರ ಪ್ರಕರಣಗಳು ಬೆಳಕಿಗೆ ಬಂದಾಗ ಆಯೋಗದ ಮೂಲಕ ಪೋಕ್ಸೊ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಮಕ್ಕಳ ಆರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಕಾವಲು ಸಮಿತಿಗಳನ್ನು ರಚಿಸಲಾಗಿದೆ. ಇದು ಮಕ್ಕಳ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಆಗದಂತೆ ಜಾಗೃತಿ ವಹಿಸಬೇಕು. ಈ ಸಮಿತಿಯಲ್ಲಿ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್‌ ಇನ್‌ಸ್ಪೆಕ್ಟರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುತ್ತಾರೆ. ವಾರದಲ್ಲಿ ಒಂದು ಬಾರಿಯಾದರು ಕಾವಲು ಸಮಿತಿಯು ಸಭೆ ನಡೆಸಿ, ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಪ್ರಕರಣಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಚರ್ಚಿಸಬೇಕು’ ಎಂದರು.

ಶಾಲಾ–ಕಾಲೇಜು ಮನೆ ಹಾಗೂ ಸಮುದಾಯದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ಬಾಲ್ಯ ವಿವಾಹ ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು
ಕೆ. ನಾಗಣ್ಣಗೌಡ  ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.