ADVERTISEMENT

ಚೀನಾ ಆ್ಯಪ್‌ ಸಾಲ ವಂಚನೆ: ₹ 106 ಕೋಟಿ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 16:06 IST
Last Updated 29 ಮಾರ್ಚ್ 2023, 16:06 IST
   

ಬೆಂಗಳೂರು: ಚೀನಾ ನಾಗರಿಕರು ಭಾರತದ ಫಿನೆಟೆಕ್‌ ಉದ್ದಿಮೆಗಳನ್ನು ಬಳಸಿಕೊಂಡು ಆ್ಯಪ್‌ಗಳ ಮೂಲಕ ಸಾಲ ನೀಡಿ ವಂಚಿಸಿದ ಪ್ರಕರಣದಲ್ಲಿ ₹ 106 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಆ್ಯಪ್‌ಗಳ ಮೂಲಕ ಸಾಲ ನೀಡಿ, ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಪೊಲೀಸರ ತನಿಖಾ ವರದಿ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ರೇಝರ್‌ಪೇ, ಕ್ಯಾಷ್‌ಫ್ರೀ, ಪೇಟಿಎಂ, ಪೇಯು, ಈಸ್‌ಬಝ್‌ ಪಾವತಿ ‘ಗೇಟ್‌ವೇ’ಗಳು ಮತ್ತು ವಿವಿಧ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡು ಸಾಲ ನೀಡಿ, ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ರೀತಿ ಸಾಲ ನೀಡಿ ವಂಚಿಸುತ್ತಿದ್ದ ಕಂಪನಿಗಳು, ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಲ್ಲಿದ್ದ ₹ 106 ಕೋಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.