ADVERTISEMENT

ಕೋಮು ಸಂಘರ್ಷ ತಡೆಗೆ ‘ಭಾವೈಕ್ಯತಾ ಸಮಾವೇಶ’: ಪ್ರಗತಿಪರರು ಚಿಂತಕರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 16:21 IST
Last Updated 29 ಮಾರ್ಚ್ 2022, 16:21 IST
   

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಕೋಮು ಸಂಘರ್ಷ ತಡೆಯುವ ಸಲುವಾಗಿ ಏಪ್ರಿಲ್ ಎರಡನೇ ವಾರದಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳ ಸಾನ್ನಿಧ್ಯದಲ್ಲಿ ‘ಭಾವೈಕ್ಯತಾ ಸಮಾವೇಶ’ವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಪ್ರಗತಿಪರರು, ಸಾಹಿತಿಗಳು ಹಾಗೂ ಚಿಂತಕರು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಭುಗಿಲೆದ್ದಿರುವಹಿಜಾಬ್ ವಿಚಾರ, ಕೋಮು ದ್ವೇಷ ಹಾಗೂ ವಿವಿಧ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ‘ಸಮನ್ವಯ ವೇದಿಕೆ’ಯು ಪ್ರಗತಿಪರರ ‘ಚಿಂತನಾ ಸಭೆ’ಯನ್ನು ಮಂಗಳವಾರ ಹಮ್ಮಿಕೊಂಡಿತ್ತು.

ಪ್ರಗತಿಪರರು, ಸಾಹಿತಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

‘ಕೋಮುವಾದಿ ಶಕ್ತಿಗಳು ತಮ್ಮ ಕದಂಬ ಬಾಹುಗಳನ್ನು ರಾಜ್ಯದಾದ್ಯಂತ ಹರಡುತ್ತಿವೆ. ರಾಜಕೀಯವಾಗಿ ಈ ವಿಷಯಗಳನ್ನು ಬಳಸಿಕೊಂಡು ಜನರಲ್ಲಿ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ. ಇದನ್ನು ತುರ್ತಾಗಿ ನಿಯಂತ್ರಣಕ್ಕೆ ತರಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡುವುದು ಅಗತ್ಯ’ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ, ‘ಕೋಮುಶಕ್ತಿಗಳು ಹಾಗೂ ಸಂವಿಧಾನ ವಿರೋಧಿಗಳು ಬಹುತ್ವ ಭಾರತವನ್ನು ಹಾಳು ಮಾಡುತ್ತಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಇದನ್ನು ತಡೆಯಬೇಕಿರುವುದು ನಮ್ಮ ಕರ್ತವ್ಯ’ ಎಂದರು.

ಪತ್ರಕರ್ತ ಬಿ.ಎಂ.ಹನೀಫ್‌, ‘ಈಗ ಎದುರಾಗಿರುವ ಸಮಸ್ಯೆಗಳನ್ನು ಧರ್ಮಗಳ ಸಮಸ್ಯೆಯಾಗಿ ನೋಡದೆ, ರಾಜಕೀಯ ಸಮಸ್ಯೆಯಾಗಿ ಎದುರಿಸಬೇಕು. ಇದೊಂದೇ ದಾರಿ’ ಎಂದರು.

ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ, ‘ಹಿಜಾಬ್‌ ವಿಚಾರ ಮುಂದಿಟ್ಟುಕೊಂಡು ಹೆಣ್ಣುಮಕ್ಕಳ ಮೇಲೆ ಅತಿಯಾದ ಶೋಷಣೆ ನಡೆಯುತ್ತಿದೆ. ಇದು, ಮಹಿಳೆಯರನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎನ್.ಎ.ಹ್ಯಾರಿಸ್, ಕಾಂಗ್ರೆಸ್‌ ಮುಖಂಡಸಿ.ಎಸ್.ದ್ವಾರಕಾನಾಥ್, ‘ಮುಖ್ಯಮಂತ್ರಿ’ ಚಂದ್ರು, ಲೇಖಕಿ ಬಿ.ಟಿ.ಲಲಿತಾ ನಾಯಕ್, ಕೆ.ಇ.ರಾಧಾಕೃಷ್ಣ, ಸಾಮಾಜಿಕ ಕಾರ್ಯಕರ್ತ ಎಚ್‌.ವಿ. ವಾಸು, ವಿಜ್ಞಾನ ಚಳವಳಿ ಕಾರ್ಯಕರ್ತೆ ಪ್ರಭಾ,ವಕೀಲ ಎನ್.ಅನಂತನಾಯ್ಕ,ಸಮನ್ವಯ ವೇದಿಕೆ ಸಂಚಾಲಕ ಸುಭಾಷ್‌ಚಂದ್ರ ಸೇರಿದಂತೆ ಹಲವರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.