ADVERTISEMENT

Chitradurga Forest | ಚಿತ್ರದುರ್ಗದ ಅರಣ್ಯದಲ್ಲಿ ಅದಿರಿಗೆ ಶೋಧ

ಮಂಜುನಾಥ್ ಹೆಬ್ಬಾರ್‌
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
   

ನವದೆಹಲಿ: ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮೀಸಲು ಅರಣ್ಯದಲ್ಲಿ ಮ್ಯಾಂಗನೀಸ್‌ ಹಾಗೂ ಕಬ್ಬಿಣದ ಅದಿರಿನ ಅನ್ವೇಷಣೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್‌) ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ. 

ತಾಲ್ಲೂಕಿನ ನೀರ್ತಡಿ ಮೀಸಲು ಅರಣ್ಯದಲ್ಲಿ 64.7 ಹೆಕ್ಟೇರ್ ಪ್ರದೇಶದಲ್ಲಿ ಕಂಪನಿಯು ಒಂದು ವರ್ಷ ಅದಿರಿನ ಹುಡುಕಾಟ ನಡೆಸಲಿದೆ. ಈಗಾಗಲೇ ಗಣಿಗಾರಿಕೆ ನಡೆದಿರುವ (ಬ್ರೋಕನ್‌ ಲ್ಯಾಂಡ್‌) 37.59 ಹೆಕ್ಟೇರ್‌ನಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸಾಧ್ಯವೇ ಎಂಬುದನ್ನು ಕಂಪನಿ ಪರಿಶೀಲನೆ ನಡೆಸಲಿದೆ. ಜತೆಗೆ, 27.16 ಹೆಕ್ಟೇರ್‌ ದಟ್ಟ ಅರಣ್ಯದಲ್ಲಿ ಪ್ರಕ್ರಿಯೆ ನಡೆಸಲಿದೆ. ಈ ಪ್ರಸ್ತಾವಕ್ಕೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಒಪ್ಪಿಗೆ ನೀಡಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಕೇಂದ್ರ ಅರಣ್ಯ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ. 

ಅದಿರು ಅನ್ವೇಷಣೆೆಗೆ ಇಲ್ಲಿ ಕೆಐಒಸಿಎಲ್‌ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಗದಿತ ಸ್ಥಳದಲ್ಲಿ ಅದಿರಿನ ನಿಕ್ಷೇಪ ಇದೆಯೇ ಇಲ್ಲವೇ ಎಂಬುದನ್ನು ಏಜೆನ್ಸಿ ಪತ್ತೆ ಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸುತ್ತದೆ. ಒಂದು ವೇಳೆ ಅದಿರು ದಾಸ್ತಾನು ಇದ್ದರೆ ಗಣಿ ಇಲಾಖೆಯು ಬ್ಲಾಕ್‌ ರಚಿಸಿ, ಅದನ್ನು ಹರಾಜಿಗಿಡುತ್ತದೆ.

ADVERTISEMENT

ಕಾಶಿಮೂರ್ತಿ ಶೆಟ್ಟಿ ಹಾಗೂ ಮಕ್ಕಳು ಹೊಂದಿರುವ ಗಣಿ ಅನುಮತಿ (ಸಂಖ್ಯೆ–1177) ಅಡಿಯಲ್ಲಿ ಅದಿರು ಅನ್ವೇಷಣೆ ಕಾರ್ಯ ಕೈ‌ಗೆತ್ತಿಕೊಳ್ಳಲು ಕೆಐಒಸಿಎಲ್‌ನ ಉಪ ಮುಖ್ಯ ವ್ಯವಸ್ಥಾಪಕರು ಅರಣ್ಯ ಇಲಾಖೆಗೆ 2024ರ ಜೂನ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಯೋಜನಾ ಪರಿಶೀಲನಾ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಅರಣ್ಯ ಇಲಾಖೆಗೆ ಕಳುಹಿಸಲಾಗಿತ್ತು. 

ಚಿತ್ರದುರ್ಗ ಡಿಸಿಎಫ್ ಅವರು ಯೋಜನಾ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಈ ಅರಣ್ಯವು ಇಳಿಜಾರಿನ ಪ್ರದೇಶವಾಗಿದ್ದು, ಕಂಪನಿಯು ಈ ಪ್ರದೇಶದಲ್ಲಿ ಮಣ್ಣು ಹಾಗೂ ತೇವಾಂಶ ಸಂರಕ್ಷಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಬಹುದು. ಆದಾಗ್ಯೂ, ಈ ಶೋಧ ಕಾರ್ಯಾಚರಣೆಯು ಅಂತಿಮವಾಗಿ ಗಣಿಗಾರಿಕೆ ಕಾರ್ಯಾಚರಣೆಗೆ ಕಾರಣವಾಗುತ್ತದೆ. ಆದ್ದರಿಂದ ಈ ಶೋಧದ ಭಾಗವಾಗಿ ಎಸ್‌ಎಂಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರಿಂದ ದೀರ್ಘಾವಧಿಯಲ್ಲಿ ಉದ್ದೇಶ ಈಡೇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜತೆಗೆ, ಗಣಿ ಹುಡುಕಾಟ ನಡೆಸಲು ಶಿಫಾರಸು ಮಾಡಿದ್ದರು. ಇದಕ್ಕೆ ಬಳ್ಳಾರಿ ಸಿಸಿಎಫ್‌ ಸಹಮತ ವ್ಯಕ್ತಪಡಿಸಿದ್ದರು. 

ಮುಖ್ಯಾಂಶಗಳು

l ಅದಿರಿನ ಹುಡುಕಾಟದ ಸಂದರ್ಭದಲ್ಲಿ 700–1000 ಮರಗಳ ಹನನ ಮಾಡಲಾಗುತ್ತದೆ

l ಅದಿರಿನ ಅನ್ವೇಷಣೆ ವೇಳೆ 24 ಕಂದಕಗಳನ್ನು ಹಾಗೂ 34 ಕೊಳವೆಬಾವಿಗಳನ್ನು ಕೊರೆಯಲಾಗುತ್ತದೆ

l ಸಾದರಹಳ್ಳಿ ಹಾಗೂ ಕೇಶವಪುರ ಅರಣ್ಯ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಲಾಗುತ್ತದೆ

l ಈ ಅರಣ್ಯದಲ್ಲಿ ಕರಡಿ, ಚಿರತೆ, ನರಿ, ಕಾಡುಹಂದಿ, ಮುಳ್ಳು ಹಂದಿ ಮತ್ತಿತರ ಕಾಡುಪ್ರಾಣಿಗಳಿವೆ

l ಗಣಿ ಹುಡುಕಾಟಕ್ಕೆ ಪ್ರತಿಯಾಗಿ ಕಂಪನಿಯು 9.4 ಹೆಕ್ಟೇರ್‌ನ ನಿವ್ವಳ ಒಟ್ಟು ಮೌಲ್ಯ ಪಾವತಿಸಲು ಒಪ್ಪಿದೆ

ವಿಧಿಸಿರುವ ಷರತ್ತುಗಳು

l ಅರಣ್ಯ ಭೂಮಿಯ ಕಾನೂನಾತ್ಮಕ ಸ್ಥಿತಿಗತಿ ಬದಲಾಗುವಂತಿಲ್ಲ

l ಪ್ರಸ್ತಾವಿತ ಪ್ರದೇಶದ ಮತ್ತು ಸುತ್ತಮುತ್ತಲಿನ ಸಸ್ಯ, ಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವಂತಿಲ್ಲ

l ಈ ಅರಣ್ಯ ಭೂಮಿಯನ್ನು ಉಪಗುತ್ತಿಗೆ ನೀಡುವಂತಿಲ್ಲ ಹಾಗೂ ಅಡಮಾನ ಇಡುವಂತಿಲ್ಲ

l ಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ

l ಕಾಡಿನಲ್ಲಿ ಕಲ್ಲುಗಳನ್ನು ಪುಡಿ ಮಾಡುವಂತಿಲ್ಲ ಹಾಗೂ ಒಡೆಯುವಂತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.